ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ ಕೃಷಿ ಹೆಚ್ಚು ಲಾಭದಾಯಕ

Last Updated 19 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿನ ಹವಾಮಾನವು ಪುಷ್ಪ ಕೃಷಿಗೆ ಹೇಳಿ ಮಾಡಿಸಿದಂತಿದೆ. ಅಲಂಕಾರಿಕ ಹೂಗಳಿಗೆ ತೀವ್ರ ಬೇಡಿಕೆ ಇರುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಪುಷ್ಪ ಕೃಷಿ ಮಾಡಬಹುದಾಗಿದೆ. ಸುಧಾರಿತ ವಿಧಾನಗಳ ಮೂಲಕ ಲಾಭದಾಯಕ ಕೃಷಿಗೆ ಅಗತ್ಯವಾದ ಮಾರ್ಗದರ್ಶನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪುಷ್ಪ ಕೃಷಿ ಘಟಕ ನೀಡಲಿದೆ.

ಈಚಿನ ವರ್ಷಗಳಲ್ಲಿ ಅಲಂಕಾರಿಕ ಹೂಗಳಿಗೆ ಬೇಡಿಕೆ ಹೆಚ್ಚಿದೆ. ಶುಭ ಸಮಾರಂಭಗಳಲ್ಲಿ ವೇದಿಕೆ ಅಲಂಕಾರಕ್ಕೆ ಹಾಗೂ ಉಡುಗೊರೆಯಾಗಿ ನೀಡಲಾಗುವ ಆಕರ್ಷಕ ಹೂಗುಚ್ಛಗಳಿಗೆ ಉತ್ತಮ ಬೇಡಿಕೆ ಇದೆ. ಅಲ್ಲದೇ ಬೆಲೆ ಕೂಡ ದುಬಾರಿ ಎನಿಸಿದೆ. ಹಾಗಾಗಿ ಈ ಕೃಷಿಗೆ ಪುಷ್ಪ ಕೃಷಿ ಘಟಕ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.

ಸಾಮಾನ್ಯವಾಗಿ ಡಚ್ ಗುಲಾಬಿ ಗಿಡಗಳನ್ನು ಹಸಿರು ಮನೆ ವಾತಾವರಣದಲ್ಲಿ ಬೆಳೆಸಬೇಕಾಗುತ್ತದೆ. ಹಸಿರು ಮನೆ ವಾತಾವರಣ ಸೃಷ್ಟಿಸಲು ಪ್ರತಿ ಚದರ ಮೀಟರ್‌ಗೆ ಸುಮಾರು 500 ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.  ಹಾಗಾಗಿ ಕಡಿಮೆ ಭೂಮಿ ಹೊಂದಿರುವ ಬಡ ರೈತರಿಗೆ ಇದು ದುಬಾರಿ ಎನಿಸುತ್ತದೆ.

ಯಶಸ್ವಿ ಪ್ರಯತ್ನ: ಡಚ್ ಗುಲಾಬಿ ತಳಿಯನ್ನು ಹಸಿರು ಮನೆ ವಾತಾವರಣಕ್ಕೆ ಪರ್ಯಾಯವಾಗಿ ಬಯಲು ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಲು ಸಾಧ್ಯವಿದೆ ಎಂಬುದು ಕೃಷಿ ವಿ.ವಿಯ ಪುಷ್ಪ ಕೃಷಿ ಘಟಕವು ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ವಿ.ವಿ ಆವರಣದಲ್ಲಿರುವ ಪುಷ್ಪ ಕೃಷಿ ಘಟಕದಲ್ಲಿ ಇದನ್ನು ನೇರವಾಗಿ ಕಾಣಬಹುದಾಗಿದೆ.

ಘಟಕವು ಎರಡು ವರ್ಷಗಳಿಂದ ಈ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡುಬಂದಿದ್ದು, ಹಸಿರು ಮನೆ ವಾತಾವರಣದಲ್ಲಿ ಬೆಳೆಯುವ ಡಚ್ ಗುಲಾಬಿಯ ಗುಣಮಟ್ಟ ಹಾಗೂ ಬಯಲಿನಲ್ಲಿ ಬೆಳೆಯುವ ಗುಲಾಬಿಯ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದಿರುವುದು ಸಾಬೀತಾಗಿದೆ.

`ಡಚ್ ಗುಲಾಬಿ ತಳಿಯನ್ನು ಹಸಿರು ಮನೆ ವಾತಾವರಣದಲ್ಲೇ ಬೆಳೆಯಬೇಕಿತ್ತು. ಒಂದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಇದು ಕಷ್ಟಕರ. ಆದರೆ ಈ ಗುಲಾಬಿಗಳನ್ನು ಬಯಲಿನಲ್ಲೂ ಬೆಳೆಯಲು ಸಾಧ್ಯವಿದೆ. ಎರಡು ವರ್ಷಗಳ ಪುನರಾವರ್ತಿತ ಪ್ರಯತ್ನದಿಂದ ಇದು ಖಾತ್ರಿಯಾಗಿದೆ~ ಎಂದು ಕೃಷಿ ವಿ.ವಿ ತೋಟಗಾರಿಕೆ ವಿಭಾಗದ ಪುಷ್ಪ ಕೃಷಿ ಘಟಕದ ಪ್ರಾಧ್ಯಾಪಕಿ ಡಾ.ಆರ್. ಜಯಂತಿ `ಪ್ರಜಾವಾಣಿ~ಗೆ ತಿಳಿಸಿದರು.

ಹೂಗುಚ್ಛಕ್ಕೂ ಜೀನಿಯಾ: `ಸೇವಂತಿ ಹೂವನ್ನು ಹೋಲುವ ಜೀನಿಯಾ ಹೂವನ್ನು ಹೂಗುಚ್ಛಗಳಿಗೆ ಬಳಸಲು ಸಾಧ್ಯವಿದೆ. ಈವರೆಗೆ ಈ ಹೂಗಳನ್ನು ಅಲಂಕಾರಕ್ಕಷ್ಟೇ ಬಳಸಲಾಗುತ್ತಿತ್ತು. ಆದರೆ ಉಡುಗೊರೆ ರೂಪದಲ್ಲಿ ನೀಡುವ ಹೂಗುಚ್ಛಗಳಲ್ಲಿ (ಬೊಕೆ) ಇದನ್ನು ಬಳಸಬಹುದಾಗಿದೆ. ಹೂ ಕಿತ್ತ ನಾಲ್ಕು ದಿನಗಳವರೆಗೆ ಇದು ಆಕರ್ಷಕವಾಗಿರುತ್ತದೆ. ಬೀಜದಿಂದಲೇ ಸಸಿ ಬೆಳೆಸಲು ಅವಕಾಶವಿದ್ದು, ವರ್ಷವಿಡೀ ಇಳುವರಿ ಪಡೆಯಬಹುದು. ಹಾಗಾಗಿ ಲಾಭದಾಯಕವೆನಿಸಿದ್ದು, ರೈತರು ಇತ್ತ ಗಮನ ಹರಿಸಬೇಕಿದೆ~ ಎಂದರು.

`ಅಯ್ಯಪ್ಪ ಚೆಂಡು ಹೂವಿಗೆ ಮುಂದಿನ ಮೂರು ತಿಂಗಳವರೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ಮಧ್ಯಂತರ ಬೆಳೆಯಾಗಿಯೂ ಬೆಳೆಯಬಹುದು. ಇದು ಸೊಂಪಾಗಿ ಬೆಳೆಯುವುದರಿಂದ ಯಾವುದೇ ಕಳೆ ಸಸಿ ಬೆಳೆಯುವುದಿಲ್ಲ. ಇದರಿಂದ ಭೂಮಿ ಕೂಡ ಹಸನಾಗುತ್ತದೆ. ಸುಧಾರಿತ ವಿಧಾನದಲ್ಲಿ ಸಸಿಗಳನ್ನು ನೆಟ್ಟರೆ ಒಂದು ಸಸಿಯಿಂದ ಗರಿಷ್ಠ 1000 ಹೂಗಳನ್ನು ಪಡೆಯಬಹುದು. ಹಾಗಾಗಿ ಈ ಮಾಸದಲ್ಲಿ ಅಯ್ಯಪ್ಪ ಚೆಂಡು ಹೂ ಬೆಳೆಯುವುದು ಲಾಭಕರ~ ಎಂದು ಮಾಹಿತಿ ನೀಡಿದರು.

`ಆಕರ್ಷಕ ಅಲಂಕಾರಿಕ ಹೂಗಳನ್ನು ಬೆಳೆಯಲು ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತಲಿನ ಹವಾಮಾನ ಪೂರಕವಾಗಿದೆ. ಸುಧಾರಿತ ವಿಧಾನಗಳನ್ನು ಅನುಸರಿಸಿದರೆ ಲಾಭದಾಯಕ ಕೃಷಿ ನಡೆಸಬಹುದು. ಆದರೆ ರೈತರಲ್ಲಿ ಹೆಚ್ಚಿನ ಅರಿವಿಲ್ಲ. ಸುಧಾರಿತ ಕ್ರಮಗಳ ಬಗ್ಗೆ ಆಸಕ್ತರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ಘಟಕದ ವತಿಯಿಂದ ನೀಡಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT