ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸುಗೊಂಡ ಟಿಕೆಟ್‌ ಲಾಬಿ

ಪಟ್ಟಿ ಸಿದ್ಧತೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಪಕ್ಷಗಳ ಮುಖಂಡರು
Last Updated 29 ಮಾರ್ಚ್ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ರಂಗು ಗಳಿಗೆ ಗಳಿಗೆಗೂ ಹೆಚ್ಚುತ್ತಿರುವ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ ಹಂಚಿಕೆ ಕಸರತ್ತು ಮತ್ತು ಟಿಕೆಟ್‌ ಆಕಾಂಕ್ಷಿಗಳ ಲಾಬಿ ಬಿರುಸುಗೊಂಡಿದೆ. 

ಏಪ್ರಿಲ್ 17ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಪ್ರಮುಖ ಮೂರೂ ಪಕ್ಷಗಳು ತಂತಮ್ಮ ಪಕ್ಷಗಳ ಅಭ್ಯರ್ಥಿಗಳ ಉಮೇದುವಾರಿಕೆ ಅಂತಿಮಗೊಳಿಸಲು ಅಣಿಯಾಗಿವೆ.

ಕಾಂಗ್ರೆಸ್‌ನಲ್ಲಿ ಹಾಲಿ 122 ಶಾಸಕರಿದ್ದು, ಅವರಲ್ಲಿ 70ಕ್ಕೂ ಹೆಚ್ಚು ಜನರಿಗೆ ಟಿಕೆಟ್‌ ಸಿಗುವ ಖಾತ್ರಿ ಇದೆ ಎನ್ನಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಮತ್ತೊಬ್ಬ ಅಭ್ಯರ್ಥಿಯ ಹೆಸರುಗಳು ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಗೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಏಳು ಜನ, ಕೆಜೆಪಿಯ (ಕರ್ನಾಟಕ ಜನತಾ ಪಕ್ಷ) ಒಬ್ಬರು ಈಗ ಕಾಂಗ್ರೆಸ್‌ ಸೇರಿದ್ದು ಅವರಿಗೆಲ್ಲಾ ಟಿಕೆಟ್‌ ಸಿಗುವ ಭರವಸೆ ಸಿಕ್ಕಿದೆ. ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಬೀದರ್ ದಕ್ಷಿಣದಿಂದ ಗೆದ್ದಿರುವ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ಆದರೆ, ಅವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಈ ಕ್ಷೇತ್ರದ ಟಿಕೆಟ್ ಹಂಚಿಕೆಯನ್ನು ಹೈಕಮಾಂಡ್ ವಿವೇಚನೆಗೆ ಬಿಡಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಜತೆ ಬುಧವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಟಿಕೆಟ್ ಹಂಚಿಕೆ ಕುರಿತು ಮಾಹಿತಿ ಪಡೆದಿದ್ದಾರೆ.

‘ಏಪ್ರಿಲ್‌ 9 ಹಾಗೂ 10ರಂದು ಪರಿಶೀಲನಾ ಸಮಿತಿ ಸಭೆ ಇದೆ. ಈ ಸಭೆಯ ಬಳಿಕ ಪಕ್ಷದ ಚುನಾವಣಾ ಮಂಡಳಿ ಸಭೆಯಲ್ಲಿ ಟಿಕೆಟ್‌ ಹಂಚಿಕೆ ಆಖೈರುಗೊಳಿಸಲಾಗುವುದು. ಏ.15ರೊಳಗೆ 224 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಪರಮೇಶ್ವರ ತಿಳಿಸಿದ್ದಾರೆ.

ದೆಹಲಿಯಲ್ಲೇ ತೀರ್ಮಾನ: ಬಿಜೆಪಿಯಲ್ಲಿ ಹಾಲಿ 42 ಶಾಸಕರಿದ್ದಾರೆ. ಟಿಕೆಟ್ ಸಿಗುವ ಭರವಸೆ ಮೇರೆಗೆ ಬಿಎಸ್‌ಆರ್‌ (ಬಡವ, ಶ್ರಮಿಕ, ರೈತರ) ಕಾಂಗ್ರೆಸ್‌ನ ಮೂವರು ಹಾಲಿ ಶಾಸಕರು, ಜೆಡಿಎಸ್‌ನಿಂದ ಇಬ್ಬರು ಮಾಜಿ ಶಾಸಕರು, ಸಮಾಜವಾದಿ ಪಕ್ಷದಿಂದ ಗೆದ್ದಿರುವ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರಿದ್ದಾರೆ.

ಪಕ್ಷದ ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳೂ ಸೇರಿದಂತೆ 224 ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಲ್ಕು ಸುತ್ತಿನ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೇ, ಆರ್‌ಎಸ್‌ಎಸ್‌ ಪ್ರಮುಖರಿಂದಲೂ ಮಾಹಿತಿ ಪಡೆದಿದ್ದಾರೆ. ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಟಿಕೆಟ್‌ ಸಿಗಲಿದೆ ಎಂದು ಶಾ, ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ಹಾಲಿ ಶಾಸಕರು, 2008ರಲ್ಲಿ ಗೆದ್ದು, 2013ರಲ್ಲಿ ಸೋತಿದ್ದ ಎಲ್ಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವ ಖಾತ್ರಿ ಇಲ್ಲ ಎಂದು ಹೇಳಲಾಗಿದೆ.

‘ಟಿಕೆಟ್ ನೀಡುವ ವಿಚಾರವನ್ನು ವರಿಷ್ಠರಿಗೆ ಬಿಡಿ, ಕ್ಷೇತ್ರದಲ್ಲಿ ಕೆಲಸ ಮಾಡಿ’ ಎಂದು ಶಾ  ಪ್ರಮುಖರಿಗೆ ಮೇಲಿಂದ ಮೇಲೆ ಸೂಚಿಸಿದ್ದಾರೆ. ಹೀಗಾಗಿ ಎಲ್ಲರೂ ದೆಹಲಿಯತ್ತ ಮುಖ ಮಾಡಿದ್ದಾರೆ. ‘ಸಂಭವನೀಯ ಪಟ್ಟಿ ಅಧ್ಯಕ್ಷರ ಬಳಿ ಇದೆ. ಎರಡು ಮೂರು ದಿನಗಳಲ್ಲಿ ದೆಹಲಿಗೆ ತೆರಳಿ ಪಟ್ಟಿ ಅಂತಿಮಗೊಳಿಸಲಾಗುವುದು’ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

124 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ
ಯನ್ನು ಜೆಡಿಎಸ್‌ ಘೋಷಣೆ ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಟ್ಟಿ ಅಂತಿಮಗೊಂಡ ಬಳಿಕ, ಅಲ್ಲಿ ಟಿಕೆಟ್ ಸಿಗದೇ ಇರುವವರಿಗೆ ಕೆಲವು ಕ್ಷೇತ್ರಗಳಲ್ಲಿ ಮಣೆ ಹಾಕುವುದು ಈ ಪಕ್ಷದ ವರಿಷ್ಠರ ಆಲೋಚನೆಯಾಗಿದೆ. ಅಲ್ಲಿಯವರೆಗೆ ಜೆಡಿಎಸ್‌ನ ಅಂತಿಮ ಪಟ್ಟಿ ಪ್ರಕಟವಾಗುವುದು ಅನುಮಾನ ಎನ್ನಲಾಗುತ್ತಿದೆ.

‘ಲಿಂಗಾಯತರಿಗೆ ಆದ್ಯತೆ ನೀಡಿ’
ಕಾಂಗ್ರೆಸ್‌ನಲ್ಲಿ ಈ ಬಾರಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಪಂಚಮಸಾಲಿ ಹಾಗೂ ಜಾಗತಿಕ ಲಿಂಗಾಯತ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರಾದ ಜಿ.ಬಿ.ಪಾಟೀಲ, ಪ್ರಭಣ್ಣ ಹುಣಸಿಕಟ್ಟಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖರು ಈ ಕುರಿತಂತೆ ಚರ್ಚಿಸಿದರು ಎಂದು ತಿಳಿದು ಬಂದಿದೆ.

‘ಈ ಬಾರಿ ಟಿಕೆಟ್‌ ಹಂಚಿಕೆ ಮಾಡುವಾಗ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಿಗೆ ಅವರು ಪತ್ರ ಬರೆದಿರುವ ಅವರು, ‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 52ರಷ್ಟಿರುವ ಒಬಿಸಿ ವರ್ಗಕ್ಕೆ ಸಮಾನತೆಯ ಅವಕಾಶ ಕಲ್ಪಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT