ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್-ಗುಲ್ಬರ್ಗ ರೈಲ್ವೆಮಾರ್ಗ ಮೊದಲ ಹಂತದ ಪರೀಕ್ಷಾರ್ಥ ಸಂಚಾರ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಬೀದರ್: ದೀರ್ಘಕಾಲದ ನಿರೀಕ್ಷೆಯ ನಂತರ ಬೀದರ್- ಗುಲ್ಬರ್ಗ ರೈಲುಮಾರ್ಗದ ಮೊದಲ ಹಂತದಲ್ಲಿ ಕಾಮಗಾರಿ ಪೂರ್ಣಗೊಂಡ ಖಾನಾಪುರ- ಹುಮನಾಬಾದ್ ನಡುವೆ ಸೋಮವಾರ ಪರೀಕ್ಷಾರ್ಥವಾಗಿ ರೈಲು ಸಂಚಾರ ನಡೆಸಲಾಯಿತು.

ಇದರೊಂದಿಗೆ ಹೈದರಾಬಾದ್ ಕರ್ನಾಟಕದ ಜನರ ಬಹುದಿನದ ಬೇಡಿಕೆಯು ಭಾಗಶಃ ಸಾಕಾರಗೊಂಡಂತಾಗಿದೆ. ಬೀದರ್‌ನಿಂದ 12 ಕಿ.ಮೀ. ದೂರದಲ್ಲಿ ಇರುವ ನೂತನ ಖಾನಾಪುರ ಜಂಕ್ಷನ್‌ನಿಂದ ಸೋಮವಾರ ಬೆಳಿಗ್ಗೆ 11ಗಂಟೆಗೆ ಪ್ರಯಾಣಿಕರಹಿತ ರೈಲ್ವೆ ಎಂಜಿನ್ (ಲೋಕೊ) ಪ್ರಯಾಣ ಆರಂಭಿಸಿತು.ದಕ್ಷಿಣ ಮಧ್ಯರೈಲ್ವೆಯ ನಿರ್ಮಾಣ ವಿಭಾಗದ ಉಪಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ, ಖಾನಾಪುರ ಜಂಕ್ಷನ್‌ನಲ್ಲಿ ಪತ್ರಕರ್ತರಿಗೆ ಯೋಜನೆಯ ವಿವರಗಳ ಮಾಹಿತಿ ನೀಡಿದರು.

ಬೀದರ್- ಗುಲ್ಬರ್ಗ ರೈಲ್ವೆಮಾರ್ಗವು ಖಾನಾಪುರ ಜಂಕ್ಷನ್‌ನಲ್ಲಿ ಬಂದು ಸೇರುವುದರಿಂದ ಅದನ್ನು ಈಗ ಖಾನಾಪುರ- ಗುಲ್ಬರ್ಗ ಮಾರ್ಗ ಎಂದು ಗುರುತಿಸಲಾಗುತ್ತಿದೆ. ಖಾನಾಪುರ- ಗುಲ್ಬರ್ಗ ನಡುವಿನ 108 ಕಿ.ಮೀ. ದೂರವನ್ನು 3ಹಂತಗಳಲ್ಲಿ ವಿಭಾಗಿಸಲಾಗಿದೆ.

ಖಾನಾಪುರ- ಹುಮನಾಬಾದ್ ನಡುವಿನ 38 ಕಿ.ಮೀ. ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ನಿಗದಿತ ಸಮಯದೊಳಗೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ 150 ಕೋಟಿ ರೂಪಾಯಿ ವೆಚ್ಚ ಆಗಿದೆ ಎಂದು ಅವರು  ಹೇಳಿದರು. ಖಾನಾಪುರ- ಹುಮನಾಬಾದ್ ನಡುವೆ ಕಣಜಿ, ಹಳ್ಳಿಖೇಡ್ (ಬಿ), ನಂದಗಾಂವ್ ಮತ್ತು ಹುಮನಾಬಾದ್ ರೈಲುನಿಲ್ದಾಣಗಳು ಇರಲಿವೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಹುಮನಾಬಾದ್- ಹಳ್ಳಿಖೇಡ್ (ಕೆ) ನಡುವಿನ ಕಾಮಗಾರಿ ಚಾಲ್ತಿಯಲ್ಲಿದೆ.

ಎರಡನೇ ಹಂತದಲ್ಲಿನ 17 ಕಿ.ಮೀ. ದೂರವನ್ನು 2012ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. ಮೂರನೇ ಹಂತದಲ್ಲಿ ಗುಲ್ಬರ್ಗ ಕಡೆಯಿಂದ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು  53 ಕಿ.ಮೀ.ಗಳ ಪೈಕಿ ಗುಲ್ಬರ್ಗದಿಂದ ತಾಜಸುಲ್ತಾನಪುರ ನಡುವಿನ 10 ಕಿ.ಮೀ. ಪ್ರದೇಶದಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ.

ಒಟ್ಟು 400 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು 2014ರೊಳಗೆ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.‘ದಕ್ಷಿಣ ಭಾರತದ ರಾಜ್ಯಗಳು ಮತ್ತು ದೆಹಲಿ ನಡುವಿನ ಅಂತರವನ್ನು 350 ಕಿ.ಮೀ. ನಷ್ಟು ಕಡಿಮೆಗೊಳಿಸಲಿರುವ ಬೀದರ್-ಗುಲ್ಬರ್ಗ ರೈಲ್ವೆ ಮಾರ್ಗವು ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ವರವಾಗಿ ಪರಿಣಮಿಸಲಿದೆ’ ಎಂದು ಭಗವಾನರಾವ್ ಖೂಬಾ  ಪ್ರತಿಕ್ರಿಯಿಸಿದರು. ರೈಲ್ವೆ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗದ ಮುಖ್ಯ ಎಂಜಿನಿಯರ್ ವಿಷ್ಣುಕಾಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT