ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ 10 ಕೋಟಿ: ಯುಎನ್‌ಎಚ್‌ಸಿಆರ್‌

Last Updated 27 ಡಿಸೆಂಬರ್ 2022, 4:18 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:ಪ್ರಪಂಚದಾದ್ಯಂತ 2022ರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ನೆರವಿನ ಅಗತ್ಯ ಇರುವವರಿಗೆ ವಿಶ್ವಸಂಸ್ಥೆಯು ಹಲವು ರೀತಿಯಲ್ಲಿ ನೆರವು ನೀಡುವುದನ್ನು ಮುಂದುವರಿಸಿದೆ ಎಂದುನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಹೇಳಿದೆ.

10 ಕೋಟಿಗೂ ಹೆಚ್ಚು ಜನರ ವಲಸೆಯ ಅಂಕಿ–ಅಂಶವನ್ನು ಉಲ್ಲೇಖಿಸಿಯುಎನ್‌ಎಚ್‌ಸಿಆರ್‌ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಅವರು 'ಇದು ಎಂದಿಗೂ ಘಟಿಸಲೇಬಾರದ ದಾಖಲೆ' ಎಂದಿದ್ದಾರೆ ಎಂದು ವಿಶ್ವಸಂಸ್ಥೆ ಸುದ್ದಿಯನ್ನು ಉಲ್ಲೇಖಿಸಿ 'ಕ್ಸಿನ್ಹುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

2021ರಲ್ಲಿ ಸುಮಾರು 9 ಕೋಟಿಗೂ ಹೆಚ್ಚು ಜನರು ವಲಸೆ ಹೋಗಿದ್ದರು. ಉಕ್ರೇನ್, ಇಥಿಯೋಪಿಯಾ, ಬುರ್ಕಿನಾ ಫಾಸೊ, ಸಿರಿಯಾ ಮತ್ತು ಮ್ಯಾನ್ಮಾರ್ ಸೇರಿದಂತೆ ಪ್ರಪಂಚದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರವು ವಲಸೆಗೆಪ್ರಮುಖ ಕಾರಣವಾಗಿವೆ.

ಯುರೋಪ್‌ ತಲುಪುವುದಕ್ಕೆ ಆದ್ಯತೆ ನೀಡುತ್ತಿರುವ ನಿರಾಶ್ರಿತ ವಲಸಿಗರು, ಮಾನವ ಕಳ್ಳಸಾಗಣೆದಾರರಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಮೆಡಿಟರೇನಿಯನ್‌ ಸಮುದ್ರದಲ್ಲಿನ ಅಪಾಯಕಾರಿ ಪ್ರಯಾಣಕ್ಕೂ ಮುಂದಾಗಬಹುದು ಎಂದು ವಿಶ್ವಸಂಸ್ಥೆಯ ಸುದ್ದಿಯಲ್ಲಿ ಹೇಳಲಾಗಿದೆ.

ಯೆಮೆನ್‌ನಲ್ಲಿ ಸಂಘರ್ಷ ಪ್ರಾರಂಭವಾಗಿ ಏಳು ವರ್ಷಗಳೇ ಕಳೆದಿವೆ. ಇದರಿಂದಾಗಿ 40 ಲಕ್ಷಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದಾರೆ. ಯೆಮೆನ್‌ನಲ್ಲಿ ವಲಸಿಗರಿಗೆ, ವಿಶೇಷವಾಗಿ ಮಹಿಳೆಯರಿಗೆ ಭೀಕರ ಪರಿಸ್ಥಿತಿಯಿದೆ. ಇದು ಇನ್ನಷ್ಟು ಹದಗೆಡುತ್ತಿದೆ.ಸಿರಿಯಾದಲ್ಲಿ 11 ವರ್ಷಗಳಿಂದಲೂ ಯುದ್ಧ ನಡೆಯುತ್ತಿದೆ. ಈ ವೇಳೆ ಜನಿಸಿರುವ ಸುಮಾರು 50 ಲಕ್ಷ ಮಕ್ಕಳು ದೇಶ ಶಾಂತಿಯುತವಾಗಿ ಇರುವುದನ್ನೇ ಕಂಡಿಲ್ಲ ಎಂದು ವಿಶ್ವಸಂಸ್ಥೆ ವಿವರಿಸಿದೆ.

ಜೋರ್ಡಾನ್‌ನ 'ಝಾತರಿ' ನಿರಾಶ್ರಿತರ ಶಿಬಿರದಲ್ಲಿರುವ 80 ಸಾವಿರಕ್ಕೂ ಹೆಚ್ಚು ಜನರು ಜೋರ್ಡಾನ್‌ ಅನ್ನು ತಮ್ಮ ತವರು ಎಂದೇ ಹೇಳಿಕೊಳ್ಳುತ್ತಾರೆ. ಸಿರಿಯಾದಿಂದ ಆಗಮಿಸಿರುವ 6.75 ಲಕ್ಷ ನೋಂದಾಯಿತ ನಿರಾಶ್ರಿತರು ಸ್ಥಳೀಯರೊಂದಿಗೆ ನಗರಗಳು ಮತ್ತು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.ಯುಎನ್ ನಿರಾಶ್ರಿತರ ಏಜೆನ್ಸಿಯ ಅಂಕಿ-ಅಂಶಗಳ ಪ್ರಕಾರ ಡಿಸೆಂಬರ್ ವೇಳೆಗೆ ಯುರೋಪಿನಾದ್ಯಂತ 78 ಲಕ್ಷಕ್ಕೂ ಹೆಚ್ಚು ಉಕ್ರೇನ್ ನಿರಾಶ್ರಿತರು ನೆಲೆಸಿದ್ದಾರೆ.ಐದು ವರ್ಷಗಳಿಂದ ಲಕ್ಷಾಂತರ ರೋಹಿಂಗ್ಯಾಗಳು ಮ್ಯಾನ್ಮಾರ್‌ ತೊರೆದಿದ್ದಾರೆ. ನೆರೆಯ ಬಾಂಗ್ಲಾದೇಶದ ಗಡಿಯುದ್ದಕ್ಕೂ ಇರುವ ವಿಶಾಲವಾದ ಕಾಕ್ಸ್ ಬಜಾರ್ ಶಿಬಿರದಲ್ಲಿ ಸುಮಾರು ಹತ್ತು ಲಕ್ಷ ನಿರಾಶ್ರಿತರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಇಥಿಯೋಪಿಯಾದ ಟಿಗ್ರೇ ಪ್ರಾಂತ್ಯದಲ್ಲಿ 2020ರ ನವೆಂಬರ್‌ನಲ್ಲಿ ಆರಂಭವಾದ ಸಶಸ್ತ್ರ ಸಂಘರ್ಷದಿಂದಾಗಿ 10 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT