ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷಾಟನೆಗಾಗಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರ ಬಂಧನ

ವಿದೇಶಗಳಲ್ಲಿ ಬಂಧಿಸಲಾಗುತ್ತಿರುವ ಶೇ 90ರಷ್ಟು ಭಿಕ್ಷುಕರು ಪಾಕಿಸ್ತಾನಕ್ಕೆ ಸೇರಿದವರು: ವರದಿ
Published 1 ಅಕ್ಟೋಬರ್ 2023, 9:44 IST
Last Updated 1 ಅಕ್ಟೋಬರ್ 2023, 9:44 IST
ಅಕ್ಷರ ಗಾತ್ರ

ಲಾಹೋರ್: ಭಿಕ್ಷಾಟನೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ ಯಾತ್ರಿಕರ ವೇಷದಲ್ಲಿದ್ದ ಹದಿನಾರು ಭಿಕ್ಷುಕರನ್ನು ಪಾಕಿಸ್ತಾನದ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನದಿಂದ ಇಳಿಸಿ ವಶಕ್ಕೆ ಪಡೆಯಲಾಗಿದೆ.

ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಎರಡು ದಿನಗಳ ಹಿಂದೆ ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿ ಸೌದಿ ವಿಮಾನದಿಂದ ಭಿಕ್ಷುಕರನ್ನು ಕೆಳಗಿಳಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಎಫ್‌ಐಎ ಪ್ರಕಾರ, ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಒಳಗೊಂಡ ಗುಂಪು ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿತ್ತು. ಉಮ್ರಾವು ಇಸ್ಲಾಮಿಕ್ ತೀರ್ಥಯಾತ್ರೆಯಾಗಿದ್ದು, ಇದನ್ನು ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳಬಹುದು.

ವಲಸೆ ಅಧಿಕಾರಿಗಳ ಪರಿಶೀಲನೆ ವೇಳೆ ತಾವು ಸೌದಿ ಅರೇಬಿಯಾಕ್ಕೆ ಭಿಕ್ಷೆ ಬೇಡಲು ಹೋಗುತ್ತಿದ್ದೇವೆ ಎಂದು ಪ್ರಯಾಣಿಕರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಿಕ್ಷಾಟನೆಯಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ತಮ್ಮ ಪ್ರಯಾಣದ ವ್ಯವಸ್ಥೆ ಮಾಡಿದ ಏಜೆಂಟರಿಗೆ ನೀಡಬೇಕೆಂದು ಒಪ್ಪಂದವಾಗಿತ್ತು ಎಂದು ಅವರು ಎಫ್‌ಐಎಗೆ ತಿಳಿಸಿದ್ದಾರೆ.

ಗಮನಾರ್ಹ ಪ್ರಮಾಣದ ಭಿಕ್ಷುಕರು ಅಕ್ರಮ ಮಾರ್ಗಗಳ ಮೂಲಕ ವಿದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಅನಿವಾಸಿ ಪಾಕಿಸ್ತಾನಿಗಳ ಸೆನೆಟ್ ಸಮಿತಿಗೆ ವರದಿ ನೀಡಿದ ಒಂದು ದಿನದ ನಂತರ ಈ ಬಂಧನ ಆಗಿದೆ.

ವಿದೇಶಗಳಲ್ಲಿ ಬಂಧಿತರಾಗುತ್ತಿರುವ ಶೇ 90ರಷ್ಟು ಭಿಕ್ಷುಕರು ಪಾಕಿಸ್ತಾನಕ್ಕೆ ಸೇರಿದವರು ಎಂದು ಸಚಿವಾಲಯದ ಕಾರ್ಯದರ್ಶಿ ಸೆನೆಟ್ ಸಮಿತಿಗೆ ವರದಿ ನೀಡಿದ್ದರು.

‘ಪಾಕಿಸ್ತಾನಿ ಭಿಕ್ಷುಕರು ಜಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ. ನಂತರ ಅವರು ಭಿಕ್ಷಾಟನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾರೆ’ಎಂದು ಕಳೆದ ತಿಂಗಳು ಸೆನೆಟ್‌ನ ಸ್ಥಾಯಿ ಸಮಿತಿಯ ಸಭೆಯಲ್ಲಿ ಕಾರ್ಯದರ್ಶಿ ಝೀಶನ್ ಖಾನ್ಜಾಡಾ ಹೇಳಿದ್ದರು.

‘ಪಾಕಿಸ್ತಾನಿ ಭಿಕ್ಷುಕರ ಬಂಧನದಿಂದಾಗಿ ತಮ್ಮ ದೇಶಗಳ ಜೈಲುಗಳು ತುಂಬಿಹೋಗಿವೆ’ ಎಂದು ಇರಾಕ್ ಮತ್ತು ಸೌದಿ ರಾಯಭಾರಿಗಳು ಸಹ ವರದಿ ಮಾಡಿದ್ದಾರೆ’ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT