ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಮೂವರು ನಾಗರಿಕರ ಸಾವು

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬೆಲೆ ಏರಿಕೆ ವಿರೋಧಿಸಿ ಭುಗಿಲೆದ್ದ ಪ್ರತಿಭಟನೆ, 6 ಮಂದಿಗೆ ಗಾಯ
Published 14 ಮೇ 2024, 15:17 IST
Last Updated 14 ಮೇ 2024, 15:17 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ವಿದ್ಯುತ್ ದರ, ಗೋಧಿ ಹಿಟ್ಟಿನ ಭಾರಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ನಡೆಸಿರುವ ಪ್ರತಿಭಟನೆ ತೀವ್ರಗೊಂಡಿದೆ. ಭದ್ರತಾ ಪಡೆಗಳು, ಪ್ರತಿಭಟನಕಾರರ ಮೇಲೆ ಪ್ರಯೋಗಿಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.

ವಿವಾದಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದ ಅರೆಸೇನಾಪಡೆಯ ರೇಂಜರ್‌ಗಳು ನಗರದಿಂದ ವಾಪಸ್‌ ಹೋಗುವಾಗ ಉದ್ರಿಕ್ತರು ಅವರು ಮೇಲೆ ಕಲ್ಲು ತೂರಿದರು. ಇದಕ್ಕೆ ಪ್ರತಿಯಾಗಿ ಭದ್ರತಾಪಡೆಗಳು ಅಶ್ರುವಾಯು ಮತ್ತು ಗುಂಡಿನ ದಾಳಿ ನಡೆಸಿದವು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಅರೆಸೇನಾಪಡೆಯ 19 ವಾಹನಗಳು ಮುಜಫ್ಫರಾಬಾದ್‌ನಿಂದ ಹೊರಹೋಗುತ್ತಿದ್ದವು. ಅವುಗಳಲ್ಲಿ ಮೂರು ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದರು. ವಾಹನಗಳು ಹೊತ್ತಿ ಉರಿಯುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿರುವುದನ್ನು  ಮುಜಫ್ಫರಾಬಾದ್‌ನ ವಿಭಾಗೀಯ ಆಯುಕ್ತ ಸರ್ದಾರ್‌ ಅದ್ನಾನ್‌ ಖಚಿತಪಡಿಸಿದ್ದಾರೆ.

ಪ್ರತಿಭಟನಕಾರರು ಮತ್ತು ಪ್ರಾದೇಶಿಕ ಸರ್ಕಾರದ ನಡುವಿನ ಮಾತುಕತೆಗಳು ಬಿಕ್ಕಟ್ಟಿನಲ್ಲಿ ಕೊನೆಗೊಂಡ ನಂತರ ಈ ಪ್ರದೇಶದಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೋಮವಾರವೇ ₹690 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದ್ದರು. ಆದಾಗ್ಯೂ ಸರ್ಕಾರದ ಈ ನಿರ್ಧಾರವು ಈ ಪ್ರದೇಶದಲ್ಲಿನ ಉದ್ವಿಗ್ನತೆ ಶಮನಗೊಳಿಸುವಲ್ಲಿ ವಿಫಲವಾಗಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿ 40 ಕೆ.ಜಿ. ಗೋಧಿಹಿಟ್ಟಿನ ದರವನ್ನು ಅಲ್ಲಿನ ರೂಪಾಯಿ ಮೌಲ್ಯದಲ್ಲಿ 3100ರಿಂದ 2000ಕ್ಕೆ ಇಳಿಸಲಾಗಿದೆ. ವಿದ್ಯುತ್ ದರವನ್ನೂ ತಗ್ಗಿಸಲಾಗಿದೆ. ಆದಾಗ್ಯೂ ಪ್ರತಿಭಟನೆಗಳು ನಿಂತಿಲ್ಲ. 

ಶುಕ್ರವಾರದಿಂದ ಈ ಪ್ರದೇಶದಲ್ಲಿ ವ್ಯಾಪಕ ಮುಷ್ಕರ ನಡೆಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿವಾದಿತ ಪ್ರದೇಶದಲ್ಲಿ ಶನಿವಾರ ಪೊಲೀಸರು ಮತ್ತು ಚಳವಳಿಗಾರರ ಮಧ್ಯೆ ಸಂಘರ್ಷ ನಡೆದಿತ್ತು. ಘಟನೆಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಮೃತಪಟ್ಟು, ನೂರಾರು ಜನ ಗಾಯಗೊಂಡಿದ್ದರು. ಅದರಲ್ಲಿ ಬಹುತೇಕರು ಪೊಲೀಸರೇ ಆಗಿದ್ದರು.

ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ವಿದ್ಯುತ್‌ ದರ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ಘೋಷಿಸಿದ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಟ ಮೇಲೆ ಪ್ರತಿಭಟನೆ ಕೈಬಿಡುವ ಕುರಿತು ನಿರ್ಧರಿಸುವುದಾಗಿ ಜೆಎಎಸಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT