ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Knife Attack In Sydney: ಶಾಪಿಂಗ್​ ಮಾಲ್‌ನಲ್ಲಿ ಚಾಕುವಿನಿಂದ ದಾಳಿ 6 ಸಾವು

Published 13 ಏಪ್ರಿಲ್ 2024, 9:51 IST
Last Updated 13 ಏಪ್ರಿಲ್ 2024, 9:51 IST
ಅಕ್ಷರ ಗಾತ್ರ

ಸಿಡ್ನಿ: ಇಲ್ಲಿನ ಜನನಿಬಿಡ ಶಾಪಿಂಗ್‌ ಮಾಲ್‌ವೊಂದರಲ್ಲಿ ಶಂಕಿತ ದಾಳಿಕೋರನೊಬ್ಬ ಚಾಕುವಿನಿಂದ ಇರಿದು ಆರು ಜನರನ್ನು ಹತ್ಯೆ ಮಾಡಿದ ಭೀಕರ ಘಟನೆ ಶನಿವಾರ ನಡೆದಿದೆ. ಇರಿತದಿಂದ ಮಗು ಸೇರಿ ಹಲವರು ಗಾಯಗೊಂಡಿದ್ದಾರೆ. ಪೊಲೀಸ್‌ ಗುಂಡೇಟಿಗೆ ದಾಳಿಕೋರ ಬಲಿಯಾಗಿದ್ದಾನೆ. 

ಸಿಡ್ನಿಯ ಪೂರ್ವ ಉಪನಗರದ ಬಾಂಡಿ ಜಂಕ್ಷನ್‌ನಲ್ಲಿರುವ ವೆಸ್ಟ್‌ಫೀಲ್ಡ್‌ ಶಾಪಿಂಗ್‌ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಹಂತಕ, ಮಗು ಸೇರಿ ಒಂಬತ್ತು ಜನರಿಗೆ ಚಾಕುವಿನಿಂದ ಇರಿದಿದ್ದಾನೆ. ಹಂತಕ ಚಾಕು ಕೈಬಿಡದಿದ್ದಾಗ ಆತನ ಮೇಲೆ ಮಹಿಳಾ ಪೊಲೀಸ್‌ ಇನ್‌ಸ್ಪೆಕ್ಟರ್‌ವೊಬ್ಬರು ಗುಂಡು ಹಾರಿಸಿ, ದಾಳಿಗೆ ಒಳಗಾಗಲಿದ್ದ ಜನರನ್ನು ರಕ್ಷಿಸಿದ್ದಾರೆ. ಹಂತಕ ಸ್ಥಳದಲ್ಲೇ ಹತನಾಗಿದ್ದಾನೆ ಎಂದು ನ್ಯೂ ಸೌತ್‌ ವೇಲ್ಸ್‌ನ ಎಸಿಪಿ ಅಂಥೋನಿ ಕುಕ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಶಂಕಿತ ವ್ಯಕ್ತಿ ಒಬ್ಬನೇ ಈ ಕೃತ್ಯ ಎಸಗಿದ್ದಾನೆ. ಆತ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆ ಈಗಷ್ಟೇ ಶುರುವಾಗಿದೆ. ಇದು ಬಹಳ ಸಮಯ ತೆಗೆದುಕೊಳ್ಳಬಹುದು’ ಎಂದು ಕುಕ್‌ ಹೇಳಿದ್ದಾರೆ.

ಇದು ಭಯೋತ್ಪಾದಕ ಕೃತ್ಯ ಎನ್ನುವುದನ್ನು ತಳ್ಳಿಹಾಕಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ನಾವು ಯಾವುದನ್ನೂ ಅಲ್ಲಗಳೆದಿಲ್ಲ. ದಾಳಿ ನಡೆಸುತ್ತಿದ್ದ ಶಂಕಿತನನ್ನು ಮಹಿಳಾ ಪೊಲೀಸ್‌ ಅಧಿಕಾರಿ ಒಬ್ಬರೇ ಎದುರಿಸಿದ್ದು, ಹಲವು ಜೀವಗಳನ್ನು ಉಳಿಸಿದ್ದಾರೆ’ ಎಂದು ಕುಕ್ ಪ್ರತಿಕ್ರಿಯಿಸಿದ್ದಾರೆ.

ಘಟನಾ ಸ್ಥಳದಲ್ಲಿ ಜನರು ದಿಕ್ಕಾಪಾಲಾಗಿ ಓಡುತ್ತಿರುವ, ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ, ಶಾಪಿಂಗ್ ಸೆಂಟರ್‌ನ ಸುತ್ತಲೂ ಅನೇಕ ಆಂಬುಲೆನ್ಸ್‌ಗಳು ಮತ್ತು ಪೊಲೀಸ್‌ ವಾಹನಗಳು ಜಮಾಯಿಸಿದ್ದ ದೃಶ್ಯಗಳ ವಿಡಿಯೊಗಳು ಎಲ್ಲೆಡೆ ಹರಿದಾಡಿವೆ.

ಗಾಯಗೊಂಡವರ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಪೊಲೀಸರು ವಿವರಿಸಿಲ್ಲ.  

ಈ ಘಟನೆಯ ಪ್ರತ್ಯಕ್ಷದರ್ಶಿ, ಆಸ್ಟ್ರೇಲಿಯಾದ ಎಬಿಸಿ ಟಿವಿಯಲ್ಲಿ ಸೌಂಡ್ ಎಂಜಿನಿಯರ್ ಆಗಿರುವ ರೋಯ್‌ ಹ್ಯೂಬರ್‌ಮನ್ ಅವರು, ‘ನಮಗೆ ಶಾಪಿಂಗ್‌ ಮಾಲ್‌ನ ಮಳಿಗೆಯೊಂದರ ಮಹಿಳೆ ಆಶ್ರಯ ನೀಡಿ, ಹಿಂಭಾಗಿಲಿನಿಂದ ಸುರಕ್ಷಿತವಾಗಿ ಹೊರ ಕಳುಹಿಸಿದರು. ಒಂದು ಅಥವಾ ಎರಡು ಬಾರಿ ಗುಂಡಿನ ಶಬ್ದವಷ್ಟೇ ನನಗೆ ಕೇಳಿಸಿತು. ಅಲ್ಲಿ ಏನು ನಡೆಯಿತು ಎನ್ನುವುದು ತಿಳಿಯಲಿಲ್ಲ’ ಎಂದು ವಾಹಿನಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT