ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ– ರಷ್ಯಾ ಬಾಂಧವ್ಯ ವಿಶ್ವಶಾಂತಿಗೆ ಅನುಕೂಲಕರ: ಪುಟಿನ್‌, ಜಿನ್‌ಪಿಂಗ್‌

ಮಾತುಕತೆ ವೇಳೆ ವ್ಲಾಡಿಮಿರ್‌ ಪುಟಿನ್‌– ಷಿ ಜಿನ್‌ಪಿಂಗ್‌ ಪ್ರತಿಪಾದನೆ
Published 16 ಮೇ 2024, 14:15 IST
Last Updated 16 ಮೇ 2024, 14:15 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾ ಮತ್ತು ರಷ್ಯಾ ನಡುವಿನ ಬಾಂಧವ್ಯ ವಿಶ್ವದಲ್ಲಿ ಶಾಂತಿ ಸ್ಥಿರಗೊಳಿಸಲು ಅತ್ಯಂತ ಪೂರಕವಾಗಿದೆ. ಅಲ್ಲದೆ, ಇತರ ದೇಶಗಳಿಗೂ ಈ ಬಾಂಧವ್ಯ ಉತ್ತಮ ಉದಾಹರಣೆಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಗುರುವಾರ ಪ್ರತಿಪಾದಿಸಿದ್ದಾರೆ.

ಉಕ್ರೇನ್‌ ವಿರುದ್ಧದ ಯುದ್ಧವನ್ನು ಸ್ಥಗಿತಗೊಳಿಸಲು ರಷ್ಯಾದ ಮೇಲೆ ಚೀನಾ ತನ್ನ ಪ್ರಭಾವ ಬಳಸುವಂತೆ ಅಮೆರಿಕ ಮತ್ತು ಯುರೋಪ್‌ ಒಕ್ಕೂಟ ಒತ್ತಡ ಹೆಚ್ಚುತ್ತಿರುವುದರ ನಡುವೆ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಪುಟಿನ್‌ ಅವರು, ಉಕ್ರೇನ್ ಕುರಿತು ಮಾತುಕತೆಗೆ ರಷ್ಯಾ ಮುಕ್ತವಾಗಿದೆ ಎಂದೂ ಹೇಳಿದ್ದಾರೆ.

‘ನಾವು ಉಕ್ರೇನ್ ಕುರಿತು ಮಾತುಕತೆಗೆ ಮುಕ್ತರಾಗಿದ್ದೇವೆ. ಆದರೆ, ಅಂತಹ ಮಾತುಕತೆಗಳು ನಮ್ಮನ್ನೂ ಒಳಗೊಂಡಂತೆ ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ದೇಶಗಳ ಹಿತಾಸಕ್ತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಪುಟಿನ್ ಹೇಳಿರುವುದಾಗಿ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಷಿನುವಾ ವರದಿ ಮಾಡಿದೆ.

ಉಕ್ರೇನ್‌ನೊಂದಿಗಿನ ತೀವ್ರ ಯುದ್ಧದ ಮಧ್ಯೆ ಐದನೇ ಅವಧಿಗೆ ರಾಷ್ಟ್ರದ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದ ಕೆಲವೇ ದಿನಗಳ ನಂತರ ಪುಟಿನ್ ತಮ್ಮ ಮೊದಲ ವಿದೇಶ ಭೇಟಿಗಾಗಿ ಗುರುವಾರ ಇಲ್ಲಿಗೆ ಆಗಮಿಸಿದ್ದಾರೆ. 

ಜಿನ್‌ ಪಿಂಗ್‌ ಅವರನ್ನು ‘ನನ್ನ ಆತ್ಮೀಯ ಸ್ನೇಹಿತ’ ಎಂದು ಸಂಬೋಧಿಸಿದ ಪುಟಿನ್, ಚೀನಾಕ್ಕೆ ಆಗಮಿಸಿರುವುದು ಮತ್ತು ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿರುವುದು ಅತೀವ ಆನಂದ ನೀಡಿದೆ ಎಂದು ಹೇಳಿದ್ದಾರೆ.

ಪುಟಿನ್‌ ಅವರ ಎರಡು ದಿನಗಳ ಈ ಭೇಟಿಯನ್ನು ಸ್ವಾಗತಿಸಿದ ಷಿ ಜಿನ್‌ ಪಿಂಗ್‌ ಅವರು, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಮಹತ್ವದ ವಿಷಯವಾಗಿದೆ ಎಂದು ಹೇಳಿದರು.

‘ಮುಕ್ಕಾಲು ಶತಮಾನದ ಈ ಅವಧಿಯಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಈ  ಉಭಯ ರಾಷ್ಟ್ರಗಳ ಸಂಬಂಧಗಳು ಸಾಕಷ್ಟು ಏರಿಳಿತಗಳ ನಡುವೆಯೂ ಮತ್ತಷ್ಟು ಗಟ್ಟಿಯಾಗಿವೆ’ ಎಂದು ತಮ್ಮ ಆತ್ಮೀಯ ಸ್ನೇಹಿತ ಪುಟಿನ್‌ ಜತೆಗಿನ ಮಾತುಕತೆ ವೇಳೆ ಷಿ ಜಿನ್‌ಪಿಂಗ್‌ ಹೇಳಿದರು.

ಉಕ್ರೇನ್‌ ಯುದ್ಧ ಉಲ್ಲೇಖಿಸದೆ ಷಿ ಜಿನ್‌ಪಿಂಗ್‌, ‘ಚೀನಾ–ರಷ್ಯಾದ ಈ ಸಂಬಂಧವು, ಪ್ರಮುಖ ಮತ್ತು ನೆರೆಹೊರೆಯ ದೇಶಗಳಿಗೆ ಪರಸ್ಪರ ಗೌರವದಿಂದ ಮತ್ತು ಪ್ರಾಮಾಣಿಕವಾಗಿ ವರ್ತಿಸಲು, ಸ್ನೇಹ ಕಾಯ್ದುಕೊಳ್ಳಲು ಮತ್ತು ಪರಸ್ಪರ ಪ್ರಯೋಜನ ಪಡೆಯಲು ಉತ್ತಮ ಉದಾಹರಣೆಯಾಗಿದೆ’ ಎಂದು ಹೇಳಿದರು.

‘ಪುಟಿನ್ ಅವರನ್ನು 40ಕ್ಕೂ ಹೆಚ್ಚು ಬಾರಿ ಪರಸ್ಪರ ಭೇಟಿಯಾಗಿದ್ದೇನೆ. ಉಭಯ ರಾಷ್ಟ್ರಗಳ ಸಂಬಂಧಕ್ಕೆ ಧ್ವನಿಯಾಗುವ, ಸ್ಥಿರ ಮತ್ತು ಸುಗಮ ಬೆಳವಣಿಗೆಯನ್ನು ಖಾತ್ರಿಪಡಿಸುವ ಕಾರ್ಯತಂತ್ರದ ಮಾರ್ಗದರ್ಶನವನ್ನು ಉಭಯತ್ರರು ಒದಗಿಸಿದ್ದೇವೆ. ಉಭಯ ರಾಷ್ಟ್ರಗಳ ಸಂಬಂಧವು ಕಷ್ಟಪಟ್ಟು ಸಂಪಾದಿಸಿದ್ದಾಗಿದೆ. ಈ ಸಂಬಂಧವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ’ ಎಂದು ಜಿನ್‌ಪಿಂಗ್‌ ಹೇಳಿದರು. 

ಚೀನಾ-ರಷ್ಯಾ ಸಂಬಂಧಗಳ ಸ್ಥಿರ ಅಭಿವೃದ್ಧಿಯು ಉಭಯ ದೇಶಗಳು ಮತ್ತು ಈ ಎರಡು ದೇಶಗಳ ಜನರ ಮೂಲಭೂತ ಹಿತಾಸಕ್ತಿಗೆ ‌ಮಾತ್ರವಲ್ಲದೆ ಪ್ರಪಂಚದ  ಶಾಂತಿ ಸ್ಥಿರತೆ ಮತ್ತು ಸಮೃದ್ಧಿಗೆ ಅನುಕೂಲಕರವಾಗಿದೆ
–ಷಿ ಜಿನ್‌ಪಿಂಗ್‌ ಚೀನಾ ಅಧ್ಯಕ್ಷ
ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಗಳು ಅವಕಾಶವಾದಿತನದಿಂದ ಕೂಡಿಲ್ಲ ಮತ್ತು ಯಾರ ವಿರುದ್ಧವೂ ನಿರ್ದೇಶಿಸಲ್ಪಟ್ಟಿಲ್ಲ ಎಂಬುದು ಸುಸ್ಪಷ್ಟ
–ವ್ಲಾಡಿಮಿರ್‌ ಪುಟಿನ್‌ ರಷ್ಯಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT