ಟೊರಾಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪ್ರಮುಖ ಹಿಂದೂ ದೇವಾಲಯವನ್ನು ಖಾಲಿಸ್ತಾನ್‌ನ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ.
ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದೆ. ದೇವಾಲಯದ ಫೇಸ್‌ಬುಕ್ ಪುಟದ ಪ್ರಕಾರ, ಆಗಸ್ಟ್ 12 ರಂದು ತಡರಾತ್ರಿ 12.29ಕ್ಕೆ ದೇಗುಲದ ಗೋಡೆ ಹಾರಿ ಬಂದ ಒಬ್ಬ ಪುರುಷ ಮತ್ತು ಮಹಿಳೆ ಉದ್ದೇಶಪೂರ್ವಕವಾಗಿ #Khalistanreferendum ಪೋಸ್ಟರ್‌ಗಳನ್ನು ಸರ್ರೆ ಮಂದಿರದ ಮುಖ್ಯ ಪ್ರವೇಶ ದ್ವಾರ ಮತ್ತು ಮುಖ್ಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಕೆನಡಾದಲ್ಲಿ ಖಾಲಿಸ್ತಾನ್‌ನ ಬೆಂಬಲಿಗರು ಹಿಂದೂ ದೇವಾಲಯಗಳ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿರುವ ಭಾರತ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಈ ಕೃತ್ಯ ಎಸಗಲಾಗಿದೆ ಎಂದು ಹೇಳಿದೆ.
‘ನ್ಯಾಯ ಬೇಕಿದ್ದರೆ ಕಾನೂನು ಮಾರ್ಗಗಳನ್ನು ಅನುಸರಿಸಬೇಕು. ಪವಿತ್ರ ಸ್ಥಳವನ್ನು ಅವಮಾನಿಸುವುದಲ್ಲ’ ಎಂದು ದೇವಾಲಯದ ವೆಬ್‌ಸೈಟ್ ತಿಳಿಸಿದೆ.
ದೇವಾಲಯ ವಿರೂಪಗೊಳಿಸಿರುವುದು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಟೊರಾಂಟೊದಲ್ಲಿನ ಭಾರತದ ಕಾನ್ಸಲ್ ಜನರಲ್ ಹೇಳಿದ್ದಾರೆ.