ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ: ರಾಷ್ಟ್ರೀಯ ಉದ್ಯಾನದಲ್ಲಿ 100ಕ್ಕೂ ಹೆಚ್ಚು ಆನೆಗಳ ಸಾವು

ಹವಾಮಾನ ಬದಲಾವಣೆ ಪರಿಣಾಮ: ಸಾವಿನ ಸಂಖ್ಯೆ ಹೆಚ್ಚುವ ಆತಂಕ
Published 19 ಡಿಸೆಂಬರ್ 2023, 16:14 IST
Last Updated 19 ಡಿಸೆಂಬರ್ 2023, 16:14 IST
ಅಕ್ಷರ ಗಾತ್ರ

ಹರಾರೆ(ಜಿಂಬಾಬ್ವೆ) : ಜಿಂಬಾಬ್ವೆಯ ಅತಿ ದೊಡ್ಡ ಹ್ವ್ಯಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಕೆಲ ದಿನಗಳಲ್ಲಿ 100ಕ್ಕೂ ಅಧಿಕ ಆನೆಗಳು ಮೃತಪಟ್ಟಿದ್ದು, ಈ ವಿದ್ಯಮಾನವು ದೇಶದಲ್ಲಿ ಭೀಕರ ಬರ ಆವರಿಸಿರುವುದನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಹವಾಮಾನ ಬದಲಾವಣೆ ಹಾಗೂ ಎಲ್‌ ನಿನೊ ಕಾರಣಗಳಿಂದಾಗಿ ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಬರುವ ದಿನಗಳಲ್ಲಿ ಮತ್ತಷ್ಟು ಮಳೆ ಕೊರತೆ ಕಂಡುಬರಲಿದೆ. ಅದರಲ್ಲೂ, ಹ್ವ್ಯಾಂಗ್ ರಾಷ್ಟ್ರೀಯ ಉದ್ಯಾನ ಸೇರಿದಂತೆ ಇತರ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಿ, ಮತ್ತಷ್ಟು ಆನೆಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವನ್ಯಜೀವಿ ತಜ್ಞರು, ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಮಾನವು ಆನೆಗಳು ಹಾಗೂ ಇತರ ಪ್ರಾಣಿಗಳ ಪಾಲಿಗೆ ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ‘ಇಂಟರ್‌ನ್ಯಾಷನಲ್ ಫಂಡ್‌ ಫಾರ್ ಎನಿಮಲ್ ವೆಲ್‌ಫೇರ್‌’ ಹೇಳಿದೆ.

‘ಎಲ್‌ ನಿನೊ ವಿದ್ಯಮಾನದಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ’ ಎಂದು ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನಗಳ ವಕ್ತಾರ ತಿನಾಶ್ ಫರಾವೊ ಹೇಳಿದ್ದಾರೆ.

ದಕ್ಷಿಣ ಅಮೆರಿಕ ಬಳಿ ಪೆಸಿಫಿಕ್‌ ಸಾಗರದ ಮೇಲ್ಮೈ ಉಷ್ಣಾಂಶದಲ್ಲಿನ ಹೆಚ್ಚಳವು ವಿಶ್ವದಾದ್ಯಂತ ಹವಾಮಾನದಲ್ಲಿ ಏರುಪೇರಿಗೆ ಕಾರಣವಾಗುತ್ತದೆ. ಇದರಿಂದ ಮಳೆ ಕಡಿಮೆಯಾಗುತ್ತದೆ. ಈ ಪ್ರಾಕೃತಿಕ ವಿದ್ಯಮಾನವನ್ನು ಎಲ್‌ ನಿನೊ ಎನ್ನಲಾಗುತ್ತದೆ.

2019ರಲ್ಲಿ ಈ ರಾಷ್ಟ್ರೀಯ ಉದ್ಯಾನದಲ್ಲಿ 200ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿದ್ದವು. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಮತ್ತೆ ಅಂತಹ ವಿದ್ಯಮಾನ ಮರುಕಳಿಸುವ ಆತಂಕ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹ್ವ್ಯಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ 45 ಸಾವಿರದಷ್ಟು ಆನೆಗಳು, ಸಸ್ತನಿ ಪ್ರಭೇದಕ್ಕೆ ಸೇರಿದ 100ಕ್ಕೂ ಅಧಿಕ ಪ್ರಾಣಿಗಳು ಹಾಗೂ 400 ಪ್ರಭೇದದ ಪಕ್ಷಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT