ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ | ಪ್ರತಿಭಟನೆ ವೇಳೆ ರೈಫಲ್ ಲೂಟಿ: ಶಸ್ತ್ರಾಸ್ತ್ರ ಒಪ್ಪಿಸಲು ಆ.19 ಗಡುವು

Published : 12 ಆಗಸ್ಟ್ 2024, 12:25 IST
Last Updated : 12 ಆಗಸ್ಟ್ 2024, 12:25 IST
ಫಾಲೋ ಮಾಡಿ
Comments

ಢಾಕಾ: ಪ್ರತಿಭಟನೆಯ ಸಮಯದಲ್ಲಿ ಪೊಲೀಸ್‌ ಠಾಣೆಗಳಿಂದ ಲೂಟಿ ಮಾಡಿರುವ ರೈಫಲ್‌ಗಳು ಒಳಗೊಂಡಂತೆ ಅಕ್ರಮವಾಗಿ ಇರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಆಗಸ್ಟ್‌ 19ರ ಒಳಗಾಗಿ ಒಪ್ಪಿಸುವಂತೆ ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್‌ ಜನರಲ್‌ (ನಿವೃತ್ತ) ಎಂ.ಸಖಾವತ್‌ ಹುಸೇನ್‌ ಅವರು ಜನರಲ್ಲಿ ಕೇಳಿಕೊಂಡಿದ್ದಾರೆ. 

ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ಹಿಂತಿರುಗಿಸಬೇಕು. ನಿಗದಿತ ಗಡುವಿನ ಬಳಿಕ ಅಧಿಕಾರಿಗಳು ಶೋಧ ಕಾರ್ಯ ನಡೆಸಲಿದ್ದು, ಆ ವೇಳೆ  ಯಾರಾದರೂ ಅನಧಿಕೃತವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹುಸೇನ್ ಹೇಳಿರುವುದಾಗಿ ‘ಡೈಲಿ ಸ್ಟಾರ್‘ ದಿನಪತ್ರಿಕೆ ವರದಿ ಮಾಡಿದೆ. 

ಇಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರೆಸೇನಾ ಪಡೆಯ ಸಿಬ್ಬಂದಿಯನ್ನು ಸೋಮವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಈಚೆಗೆ ನಡೆದ ಹಿಂಸಾಚಾರದ ವೇಳೆ ಅರೆಸೇನಾ ಪಡೆಯ ಹಲವು ಸಿಬ್ಬಂದಿ ಗಾಯಗೊಂಡಿದ್ದರು.

ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಒಳಗೊಂಡಂತೆ ಸುಮಾರು 500 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಯುವಕನೊಬ್ಬ 7.62 ಎಂಎಂ ರೈಫಲ್‌ ಅನ್ನು ಕೊಂಡೊಯ್ಯುತ್ತಿರುವ ದೃಶ್ಯವಿರುವ ವಿಡಿಯೊ ಹರಿದಾಡಿದೆ. ಅಂದರೆ ಅವರು ಇನ್ನೂ ರೈಫಲ್‌ ಒಪ್ಪಿಸಿಲ್ಲ. ಭಯದಿಂದಾಗಿ ನೀವು ಬಂದೂಕು ವಾಪಸ್‌ ಮಾಡದಿದ್ದರೆ, ಬೇರೆಯವರ ಮೂಲಕ ಒಪ್ಪಿಸಿ’ ಎಂದು ಹೇಳಿದರು.

ಪೊಲೀಸರ ಮುಷ್ಕರ ಅಂತ್ಯ: ಬಾಂಗ್ಲಾದೇಶದ ಪೊಲೀಸರು ತಮ್ಮ ಮುಷ್ಕರ ಅಂತ್ಯಗೊಳಿಸಲು ಒಪ್ಪಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ. 

ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ದೇಶದಾದ್ಯಂತ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಬಾಂಗ್ಲಾ ಪೊಲೀಸರು ಆಗಸ್ಟ್‌ 6ರಿಂದ ಮುಷ್ಕರ ಆರಂಭಿಸಿ, ಕರ್ತವ್ಯದಿಂದ ದೂರವುಳಿದಿದ್ದರು. 

ದುಷ್ಕೃತ್ಯ ಸಹಿಸಲ್ಲ: ಸಿಜೆ

ನ್ಯಾಯಾಂಗ ವ್ಯವಸ್ಥೆಯಲ್ಲಿದ್ದುಕೊಂಡು ಯಾರಾದರೂ ‘ದುಷ್ಕೃತ್ಯ’ದಲ್ಲಿ ತೊಡಗಿದರೆ ಅದನ್ನು ಸಹಿಸುವುದಿಲ್ಲ ಎಂದು ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಸೈಯದ್‌ ರೆಫಾತ್‌ ಅಹ್ಮದ್‌ ಎಚ್ಚರಿಸಿದ್ದಾರೆ. ಅಟಾರ್ನಿ ಜನರಲ್‌ ಅವರ ಕಚೇರಿಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ನ್ಯಾಯದ ಬದಲಾಗಿ ಇಷ್ಟು ದಿನ ಚಾಲ್ತಿಯಲ್ಲಿದ್ದ ದಬ್ಬಾಳಿಕೆಯ ನೀತಿ ಈಗ ಅಂತ್ಯಗೊಂಡಿದೆ. ಆದ್ದರಿಂದ ನ್ಯಾಯಾಂಗದ ವಿರುದ್ಧವಾಗಿ ಯಾರಾದರೂ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಶೇಖ್‌ ಹಸೀನಾ ಅವರ ಸರ್ಕಾರವನ್ನು ಉರುಳಿಸುವ ಚಳವಳಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT