ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಡ್ರೋಜನ್‌ ಚಾಲಿತ ವಿಹಾರ ನೌಕೆ ಖರೀದಿಸಿದ ಬಿಲ್‌ ಗೇಟ್ಸ್‌; ಬೆಲೆ ₹4,600 ಕೋಟಿ

Last Updated 10 ಫೆಬ್ರುವರಿ 2020, 9:09 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಮೈಕ್ರೊಸಾಫ್ಟ್‌ ಸಹ–ಸಂಸ್ಥಾಪಕ ಮತ್ತು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಬಿಲ್‌ ಗೇಟ್ಸ್‌ ಲಿಕ್ವಿಡ್‌ ಹೈಡ್ರೋಜನ್‌ ಬಳಸಿ ಸಾಗುವ ಸೂಪರ್‌ಯಾಚ್‌ (ಐಷಾರಾಮಿ ವಿಹಾರ ನೌಕೆ) ಖರೀದಿಸಿದ್ದಾರೆ.

ಬೇಸಿಗೆ ಕಾಲದ ಪ್ರವಾಸಗಳಲ್ಲಿ ವಿಹಾರಕ್ಕೆ ಐಷಾರಾಮಿ ಬೃಹತ್‌ ದೋಣಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಬಿಲ್‌ ಗೇಟ್ಸ್‌, ಇದೀಗ ಸ್ವಂತ ವಿಹಾರ ನೌಕೆಯನ್ನು ಖರೀದಿಸಿದ್ದಾರೆ. ಲಿಕ್ವಿಡ್‌ ಹೈಡ್ರೋಜನ್‌ ಬಳಸಿ ಸಾಗುವ ನೌಕೆಯು ನೀರನ್ನು ಹೊರಬಿಡುತ್ತದೆ. ಭವಿಷ್ಯದ ಯಾನ ವ್ಯವಸ್ಥೆ ಹೊಂದಿರುವ ನೌಕೆಯಾದ ಇದನ್ನು ₹4,600 ಕೋಟಿ ನೀಡಿ ಖರೀದಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ 'ಮೊನಾಕೊ ಯಾಚ್‌ ಶೋ' ಸಂದರ್ಭದಲ್ಲಿ ಸೂಪರ್‌ಯಾಚ್‌ ಖರೀದಿಸುವ ಯೋಚನೆ ಇರುವುದಾಗಿ ಬಿಗ್‌ ಗೇಟ್ಸ್‌ ಬಹಿರಂಗ ಪಡಿಸಿದ್ದರು. ಲಿಕ್ವಿಡ್‌ ಹೈಡ್ರೋಜನ್‌ ಇಂಧನವಾಗಿ ಬಳಸಿರುವ ಮೊದಲ ಐಷಾರಾಮಿ ನೌಕೆ ಇದಾಗಿದೆ.

ನೌಕೆ ಹೇಗಿದೆ?

370 ಅಡಿ ಉದ್ದದ ಐಷಾರಾಮಿ ನೌಕೆಯು ಐದು ಅಂತಸ್ತು (ಅಟ್ಟ) ಹೊಂದಿದ್ದು, 14 ಅತಿಥಿಗಳಿಗೆ ವ್ಯವಸ್ಥೆಯಿದೆ. ಜಿಮ್‌, ಯೋಗ ಸ್ಟುಡಿಯೊ, ಬ್ಯೂಟಿ ರೂಂ, ಮಸಾಜ್‌ ಪಾರ್ಲರ್‌ ಹಾಗೂ ನೌಕೆಯ ಹಿಂಬದಿಯ ಡಕ್ಕೆಯಲ್ಲಿ ಕೊಳ ಹಾಗೂ 31 ಮಂದಿ ಸಿಬ್ಬಂದಿಯನ್ನು ಸೂಪರ್‌ಯಾಚ್‌ ಒಳಗೊಂಡಿರುವುದಾಗಿ ದಿ ಡೈಲಿ ಮೇಲ್‌ ವರದಿ ಮಾಡಿದೆ.

ವಿಶೇಷ ವ್ಯವಸ್ಥೆಯಲ್ಲಿ ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಬೆರೆಸುವಿಕೆಯಿಂದ ಶಕ್ತಿ ಉತ್ಪಾದನೆಯಾಗುತ್ತದೆ. ಇಂಧನ ಟ್ಯಾಂಕ್‌ ಅಥವಾ ಬ್ಯಾಟರಿಯೊಳಗೆ ಪ್ರಕ್ರಿಯೆಯಲ್ಲಿ ನೀರು ಮತ್ತು ಶಾಖ ಬಿಡುಗಡೆಯಾಗುತ್ತದೆ. ಈಗಾಗಲೇ ಕಾರು, ಬಸ್‌ ಸೇರಿದಂತೆ ಬೃಹತ್‌ ವಾಹನಗಳಲ್ಲಿ ಇಂಧನ ಘಟಕ ಮತ್ತು ಬ್ಯಾಟರಿ ಅಳವಡಿಸಿ ಲಿಕ್ವಿಡ್‌ ಹೈಡ್ರೋಜನ್‌ ವ್ಯವಸ್ಥೆ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT