ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel–Hamas war | ಕದನ ವಿರಾಮಕ್ಕೆ ಯತ್ನ: ಈಜಿಪ್ಟ್‌ಗೆ ಬ್ಲಿಂಕನ್ ಭೇಟಿ

Published 6 ಫೆಬ್ರುವರಿ 2024, 13:33 IST
Last Updated 6 ಫೆಬ್ರುವರಿ 2024, 13:33 IST
ಅಕ್ಷರ ಗಾತ್ರ

ಕೈರೊ: ಈಜಿಪ್ಟ್‌ನ ನಾಯಕರನ್ನು ಭೇಟಿ ಮಾಡಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಮಂಗಳವಾರ ಕೈರೊ ನಗರಕ್ಕೆ ಭೇಟಿ ನೀಡಿದರು. ಇಸ್ರೇಲ್–ಹಮಾಸ್ ನಡುವೆ ಯುದ್ಧ ವಿರಾಮ ಘೋಷಿಸುವ ಬಗ್ಗೆ ಹಾಗೂ ಬಂಡುಕೋರರ ವಶದಲ್ಲಿ ಇರುವ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಮಾತುಕತೆ ನಡೆಸುವುದು ಬ್ಲಿಂಕನ್ ಭೇಟಿಯ ಉದ್ದೇಶ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ಪಟ್ಟಿಯ ಮೇಲಿನ ದಾಳಿಯು ಹಂತ ಹಂತವಾಗಿ ರಫಾ ನಗರವನ್ನೂ ಒಳಗೊಳ್ಳುತ್ತದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಈ ನಗರವು ಈಜಿಪ್ಟ್‌ ಗಡಿಗೆ ಹೊಂದಿಕೊಂಡಿದೆ. ಇಸ್ರೇಲ್‌ನ ಉದ್ದೇಶವು ಈಜಿಪ್ಟ್‌ನ ಕಳವಳಕ್ಕೆ ಕಾರಣವಾಗಿದೆ. ಗಡಿ ಪ್ರದೇಶದಲ್ಲಿ ಇಸ್ರೇಲ್ ತನ್ನ ಸೇನೆಯನ್ನು ನಿಯೋಜಿಸಿದಲ್ಲಿ, ನಾಲ್ಕು ದಶಕಗಳ ಹಿಂದೆ ಸಹಿ ಮಾಡಲಾದ ಈಜಿಪ್ಟ್‌–ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಬೆದರಿಕೆ ಎದುರಾಗುತ್ತದೆ ಎಂದು ಈಜಿಪ್ಟ್‌ ಎಚ್ಚರಿಕೆ ನೀಡಿದೆ.

ಪ್ಯಾಲೆಸ್ಟೀನ್ ನಾಗರಿಕರನ್ನು ಗಾಜಾದಿಂದ ಒತ್ತಾಯಪೂರ್ವಕವಾಗಿ ಹೊರಹಾಕಬಾರದು ಎಂದು ಬ್ಲಿಂಕನ್ ಅವರು ಹಲವು ಬಾರಿ ಹೇಳಿದ್ದಾರೆ. ಬ್ಲಿಂಕನ್ ಅವರು ಈ ಬಾರಿಯ ಭೇಟಿ ಸಂದರ್ಭದಲ್ಲಿ ಇಸ್ರೇಲ್–ಸೌದಿ ಅರೇಬಿಯಾ ಸಂಬಂಧವನ್ನು ಸುಧಾರಿಸುವ ಬಗ್ಗೆ ಹಾಗೂ ಈ ಪ್ರದೇಶದಲ್ಲಿ ನಡೆದಿರುವ ಸಂಘರ್ಷವು ಇನ್ನಷ್ಟು ವಿಸ್ತರಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ಕೂಡ ಹೊಂದಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದವೊಂದನ್ನು ಸಾಧ್ಯವಾಗಿಸಲು ಈಜಿಪ್ಟ್‌ ಮತ್ತು ಕತಾರ್ ಪ್ರಯತ್ನಿಸುತ್ತಿವೆ. ಒಪ್ಪಂದದ ರೂಪುರೇಷೆಗಳನ್ನು ಅಮೆರಿಕ, ಈಜಿಪ್ಟ್‌, ಕತಾರ್ ಮತ್ತು ಇಸ್ರೇಲ್‌ನ ಗುಪ್ತಚರ ವಿಭಾಗಗಳ ಮುಖ್ಯಸ್ಥರು ರೂಪಿಸಿದ್ದಾರೆ. ಇದನ್ನು ಹಮಾಸ್‌ಗೆ ರವಾನಿಸಲಾಗಿದೆ. ಆದರೆ ಬಂಡುಕೋರರ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಬ್ಲಿಂಕನ್ ಅವರು ಅರಬ್ ನಾಯಕರ ಜೊತೆಗಿನ ಮಾತುಕತೆಯಲ್ಲಿ ವ್ಯಕ್ತವಾಗುವ ಅಂಶಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಲಿದ್ದಾರೆ. ಪ್ಯಾಲೆಸ್ಟೀನ್ ರಾಷ್ಟ್ರ ಸೃಷ್ಟಿಗೆ ವಿಶ್ವಾಸಾರ್ಹವಾದ ಯೋಜನೆಯೊಂದು ಇದೆ ಎಂದಾದಲ್ಲಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ತನಗೆ ಈಗಲೂ ಆಸಕ್ತಿ ಇದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT