ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ಗೆ ಮತ್ತೊಂದು ಅವಧಿ ಖಚಿತ

ಕಮ್ಯುನಿಸ್ಟ್ ಪಕ್ಷದ ಸಮಾವೇಶ ಮುಕ್ತಾಯ: ಹಿಡಿತ ಬಿಗಿಗೊಳಿಸಿದ ಚೀನಾ ಅಧ್ಯಕ್ಷ
Last Updated 22 ಅಕ್ಟೋಬರ್ 2022, 15:32 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾ ಕಮ್ಯುನಿಸ್ಟ್‌ ಪಕ್ಷವು ಐದು ವರ್ಷಕ್ಕೊಮ್ಮೆ ನಡೆಸುವ ಸಮಾವೇಶವು ಶನಿವಾರ ಸಮಾರೋಪಗೊಂಡಿದ್ದು, ಪ್ರಧಾನ ಕಾರ್ಯದರ್ಶಿ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಪಕ್ಷದ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಮೂರನೇ ಅವಧಿಗೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ದೇಶದ ಅಧ್ಯಕ್ಷರಾಗಿ ಮುಂದುವರಿಯುವುದು ಖಚಿತವಾಗಿದೆ.

ಹಲವು ಪ್ರಮುಖರನ್ನು ಹುದ್ದೆಗಳಿಂದ ಕೈಬಿಡುವ ಮಹತ್ವದ ನಿರ್ಧಾರವನ್ನು ವಾರ ಕಾಲ ಬೀಜಿಂಗ್‌ನಲ್ಲಿ ನಡೆದ ಸಮಾವೇಶದಲ್ಲಿ ತೆಗೆದುಕೊಳ್ಳಲಾಗಿದೆ. ಪ್ರಧಾನಿ ಲಿ ಕೆಕಿಯಾಂಗ್‌ ಅವರೂ ಹುದ್ದೆಯಿಂದ ಕೆಳಕ್ಕೆ ಇಳಿಯಲಿದ್ದಾರೆ.

2,300 ಪ್ರತಿನಿಧಿಗಳ ಸಮಾವೇಶವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಕೊನೆಯ ಕ್ಷಣದ ಬದಲಾವಣೆಗಳು ಅಥವಾ ಅಚ್ಚರಿಯ ಕ್ರಮಗಳಿಗೆ ಯಾವುದೇ ಅವಕಾಶ ಇರಲಿಲ್ಲ. ತಮಗೆ ಇನ್ನೊಂದು ಅವಧಿಯ ಅಧಿಕಾರ ದೊರೆಯುವ ಕಾರ್ಯಕ್ರಮವಾದ ಕಾರಣ ಜಿನ್‌ಪಿಂಗ್ ಅವರು ಅತ್ಯಂತ ಎಚ್ಚರಿಕೆ ವಹಿಸಿದ್ದರು.

‘ಕಾಮ್ರೇಡ್‌ ಷಿ ಜಿನ್‌ಪಿಂಗ್ ಅವರು ಪಕ್ಷದ ಕೇಂದ್ರ ಸಮಿತಿ ಮತ್ತು ಇಡೀ ಪಕ್ಷದ ಕೇಂದ್ರ ವ್ಯಕ್ತಿ’ ಎಂಬ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಗಿದೆ. ಕೇಂದ್ರ ಸಮಿತಿಯ ಸಭೆಯು ಭಾನುವಾರ ನಡೆಯಲಿದೆ. ಈ ಸಭೆಯ ಬಳಿಕ ಷಿ ಅವರ ಪುನರಾಯ್ಕೆಯನ್ನು ಘೋಷಿಸಲಾಗುವುದು.

ಸುಮಾರು 200 ಸದಸ್ಯರು ಇರುವ ಕೇಂದ್ರ ಸಮಿತಿಯನ್ನು ಸಮಾವೇಶದ ಸಮಾರೋಪಕ್ಕೆ ಮೊದಲು ಆಯ್ಕೆ ಮಾಡಲಾಗಿದೆ. ಪಕ್ಷದ ಏಳು ಸದಸ್ಯರ ಸ್ಥಾಯಿ ಸಮಿತಿಯ ನಾಲ್ವರು ಈ ವರ್ಷ ನಿವೃತ್ತರಾಗಲಿದ್ದಾರೆ. ಹಾಲಿ ಪ್ರಧಾನಿ ಲಿ ಕೆಕಿಯಾಂಗ್‌, ಪಾಲಿಟ್‌ಬ್ಯೂರೊ ಸದಸ್ಯ ವಾಂಗ್‌ ಯಾಂಗ್‌ (ಇವರು ಕೆಕಿಯಾಂಗ್‌ ಅವರ ಉತ್ತರಾಧಿಕಾರಿ ಆಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು), ಹಾನ್‌ ಝೆಂಗ್‌ ಮತ್ತು ಲಿ ಝಂಶು ಅವರು ನಿವೃತ್ತರಾಗಲಿದ್ದಾರೆ.

ಝೆಂಗ್‌ ಮತ್ತು ಝಂಶು ಅವರಿಗೆ 68 ವರ್ಷ ದಾಟಿದ್ದರಿಂದ ಅವರು ನಿವೃತ್ತರಾಗುತ್ತಿದ್ದಾರೆ. 68 ವರ್ಷದ ನಂತರ ಮಹತ್ವದ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ ಎಂಬ ಅನೌಪಚಾರಿಕ ನಿಯಮವೊಂದು ಚೀನಾದ ಕಮ್ಯುನಿಸ್ಟ್‌ ಪಕ್ಷದಲ್ಲಿ ಇದೆ. ಆದರೆ, 69 ವರ್ಷ ವಯಸ್ಸಾಗಿರುವ ಜಿನ್‌ಪಿಂಗ್ ಅವರಿಗೆ ಇದನ್ನು ಅನ್ವಯಿಸಲಾಗಿಲ್ಲ.

67 ವರ್ಷದವರಾಗಿರುವ ವಾಂಗ್‌ ಮತ್ತು ಕೆಕಿಯಾಂಗ್‌ ಅವರು ಇನ್ನೊಂದು ಅವಧಿಗೆ ಮುಂದುವರಿಯಲು ಅವಕಾಶ ಇತ್ತು. ಹಾಗಿದ್ದರೂ ಅವರು ನಿವೃತ್ತರಾಗಿದ್ದಾರೆ.

ಮಾಜಿ ವಿದೇಶಾಂಗ ಸಚಿವ ಯಾಂಗ್‌ ಜೈಚಿ ಮತ್ತು ಜಿನ್‌ಪಿಂಗ್ ಅವರ ಬಲಗೈ ಎಂದೇ ಗುರುತಿಸಿಕೊಂಡಿದ್ದ ಉಪಪ್ರಧಾನಿ ಲಿಯು ಹಿ ಅವರ ಗೈರುಹಾಜರಿ ಅಚ್ಚರಿಗೆ ಕಾರಣವಾಗಿದೆ.

‘ಷಿ ಜಿನ್‌ಪಿಂಗ್‌ ಅವರ ಚಿಂತನೆಗಳು’ ಪಕ್ಷದ ಮಾರ್ಗದರ್ಶಕ ಸಿದ್ಧಾಂತ ಎಂದು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದೇ ಎಂಬ ಕುತೂಹಲ ಮೂಡಿತ್ತು. ಹಾಗೆ ಮಾಡಿದರೆ, ಪೀಪಲ್ಸ್ ರಿಪಬ್ಲಿಕ್ ಆಫ್‌ ಚೀನಾದ ಸಂಸ್ಥಾಪಕ ಮಾವೊ ಜೆಡಾಂಗ್‌ ಅವರಿಗೆ ಸಮಾನವಾದ ಸ್ಥಾನ ಜಿನ್‌ಪಿಂಗ್ ಅವರಿಗೆ ದೊರೆತಂತಾಗುತ್ತದೆ. ಆದರೆ, ತೈವಾನ್‌ ಪ್ರತ್ಯೇಕತಾವಾದವನ್ನು ಸಂಪೂರ್ಣವಾಗಿ ವಿರೋಧಿಸುವ ನಿರ್ಣಯವನ್ನೂ ಅಂಗೀಕರಿಸಲಾಗಿದೆ.

ಒಬ್ಬ ವ್ಯಕ್ತಿ ಎರಡು ಅವಧಿಗೆ ಮಾತ್ರ ದೇಶದ ಅಧ್ಯಕ್ಷರಾಗಿ ಇರಬಹುದು ಎಂಬ ನಿಯಮವನ್ನು ಜಿನ್‌‍ಪಿಂಗ್ ಅವರು 2018ರಲ್ಲಿಯೇ ಬದಲಾಯಿಸಿದ್ದಾರೆ. ಅನಿರ್ದಿಷ್ಟ ಅವಧಿಗೆ ಅಧಿಕಾರದಲ್ಲಿ ಇರಲು ಈ ಬದಲಾವಣೆಯು ಅವರಿಗೆ ಅವಕಾಶ ಕೊಟ್ಟಿದೆ. ಮಾವೊ ನಂತರದಲ್ಲಿ ಚೀನಾದ ಅತ್ಯಂತ ಪ್ರಬಲ ನಾಯಕ ಎಂಬ ಸ್ಥಾನವನ್ನು ಜಿನ್‌ಪಿಂಗ್ ಅವರು ತಮ್ಮದಾಗಿಸಿಕೊಂಡಿದ್ದಾರೆ.

ಜಿನ್‌ಪಿಂಗ್ ಅವರು ತಮ್ಮ ಉತ್ತರಾಧಿಕಾರಿಯನ್ನು ಪಾಲಿಟ್‌ಬ್ಯೂರೊಗೆ ನೇಮಕ ಮಾಡಲಿದ್ದಾರೆಯೇ ಎಂಬ ಕುತೂಹಲ ಇದೆ. ಸ್ಥಾಯಿ ಸಮಿತಿಯಲ್ಲಿ ಯಾರು ಇದ್ದಾರೆ ಎಂಬುದು ಭಾನುವಾರ ಬಹಿರಂಗವಾದ ಬಳಿಕ ಈ ಪ್ರಶ್ನೆಗೆ ಉತ್ತರ ದೊರಕಲಿದೆ.

ಸಮಾರೋಪದಿಂದ ಜಿಂಟಾವೊ ಹೊರಕ್ಕೆ

ಮಾಜಿ ಅಧ್ಯಕ್ಷ ಹು ಜಿಂಟಾವೊ ಅವರನ್ನು ಸಮಾರೋಪ ಸಮಾರಂಭದಿಂದ ಹೊರಕ್ಕೆ ಕಳುಹಿಸಿದ ಅಚ್ಚರಿಯ ವಿದ್ಯಮಾನ ಶನಿವಾರ ನಡೆದಿದೆ. ಅಂತರ್ಜಾಲದ ಮೇಲೆ ನಿಗಾ ಇರಿಸಲಾಗಿದ್ದು, ಜಿಂಟಾವೊ ಅವರಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿ ಚೀನಾದಲ್ಲಿ ಲಭ್ಯವಾಗದಂತೆ ಮಾಡಲಾಗಿದೆ.

ದುರ್ಬಲಗೊಂಡಂತೆ ಕಾಣುತ್ತಿದ್ದ 79 ವರ್ಷದ ಜಿಂಟಾವೊ ಅವರಿಗೆ ಸಮಾರಂಭದಿಂದ ಎದ್ದು ಹೋಗಲು ಇಷ್ಟ ಇರಲಿಲ್ಲ. ಸಮಾರಂಭದಲ್ಲಿ ಅವರು ಮೊದಲ ಸಾಲಿನಲ್ಲಿ, ಜಿನ್‌ಪಿಂಗ್ ಅವರ ಸಮೀಪ ಕುಳಿತಿದ್ದರು.

ಅಧಿಕಾರಿಯೊಬ್ಬರು ಅವರನ್ನು ತೋಳು ಹಿಡಿದು ಎತ್ತಿ ಹೊರಗೆ ಒಯ್ಯಲು ಯತ್ನಿಸಿದರು. ಆ ಸಂದರ್ಭದಲ್ಲಿ ಜಿಂಟಾವೊ ಅವರು ಜಿನ್‌ಪಿಂಗ್ ಮತ್ತು ಕೆಕಿಯಾಂಗ್ ಅವರೊಂದಿಗೆ ಒಂದು ನಿಮಿಷ ಮಾತುಕತೆ ನಡೆಸಿದರು. ಬಳಿಕ ಅವರು ಸಭಾಂಗಣದಿಂದ ಹೊರ ನಡೆದ ವಿಡಿಯೊ ಬಹಿರಂಗವಾಗಿದೆ. ಬಹುತೇಕ ‘ರಬ್ಬರ್ ಸ್ಟ್ಯಾಂಪ್‌’ ಮಾದರಿಯ ಪ್ರತಿನಿಧಿಗಳ ಗುಂಪಿನಲ್ಲಿ ಯಾರೊಬ್ಬರೂ ಏನನ್ನೂ ಮಾತನಾಡಲಿಲ್ಲ.

ಸಮಾವೇಶಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇರಲಿಲ್ಲ. ಆದರೆ, ಸಮಾರೋಪ ಸಮಾರಂಭವನ್ನು ವರದಿ ಮಾಡಲು ಅವಕಾಶ ಕೊಡಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದ ಸಂದರ್ಭದಲ್ಲಿಯೇ ಜಿಂಟಾವೊ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಹಾಗಾಗಿ, ಇದು ವರದಿಯಾಗಿದೆ.

ಅಸ್ವಸ್ಥಗೊಂಡ ಕಾರಣ ಜಿಂಟಾವೊ ಅವರನ್ನು ಸಭಾಂಗಣದಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರು. ಹಾಗಿದ್ದರೂ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಹಟ ಹಿಡಿದರು. ಅಸ್ವಸ್ಥಗೊಂಡ ಅವರನ್ನು ಅವರ ಸಿಬ್ಬಂದಿ ಸಮೀಪದ ಕೊಠಡಿಗೆ ಕರೆದೊಯ್ದರು ಎಂದು ವರದಿ ಹೇಳಿದೆ.

*

ಷಿ ಅವರು ಚೀನಾದ ಸರ್ವಾಧಿಕಾರಿ. ಅವರಿಗೆ ಸಲಹೆ ನೀಡಲು ಅಥವಾ ಅವರ ನಿರ್ಧಾರಗಳನ್ನು ಬದಲಿಸಲು ಪ್ರಯತ್ನಿಸುವುದಕ್ಕೂ ಅವಕಾಶ ಇಲ್ಲ.
–ಸ್ಟೀವ್‌ ತ್ಸಾಂಗ್‌, ನಿರ್ದೇಶಕ, ಎಸ್‌ಒಎಎಸ್‌ ಚೀನಾ ಇನ್ಸ್‌ಟಿಟ್ಯೂಟ್‌, ಲಂಡನ್‌ ಯುನಿವರ್ಸಿಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT