ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಟ್ಟೊ ಗಲ್ಲು ಪ್ರಕರಣ | ನ್ಯಾಯಯುತ ವಿಚಾರಣೆ ಆಗಿಲ್ಲ: ಸುಪ್ರೀಂ ಕೋರ್ಟ್‌

Published 6 ಮಾರ್ಚ್ 2024, 14:12 IST
Last Updated 6 ಮಾರ್ಚ್ 2024, 14:12 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಮಿಲಿಟರಿ ಆಡಳಿತವಿದ್ದಾಗ 1979ರಲ್ಲಿ ಗಲ್ಲಿಗೇರಿಸಲಾದ ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್‌ ಅಲಿ ಭುಟ್ಟೊ ಅವರನ್ನು ನ್ಯಾಯಯುತವಾಗಿ ವಿಚಾರಣೆಗೆ ಒಳಪಡಿಸಲಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತಿಳಿಸಿದೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಸಂಸ್ಥಾಪಕನಿಗೆ ನೀಡಲಾದ ಮರಣದಂಡನೆ ಕುರಿತು ಸುಪ್ರೀಂ ಕೋರ್ಟ್‌ನ 9 ಸದಸ್ಯರ ವಿಸ್ತೃತ ಪೀಠದ ಸರ್ವಾನುಮತದ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿ ಖಾಜಿ ಫೇಜ್‌ ಇಸಾ ಪ್ರಕಟಿಸಿದರು.

1979ರಲ್ಲಿ ಗಲ್ಲಿಗೇರಿಸಲಾದ ತಮ್ಮ ಮಾವ ಭುಟ್ಟೊ ಅವರ ಕುರಿತ ಈ ಪ್ರಕರಣವನ್ನು ಮರು ಪರಿಶೀಲನೆ ನಡೆಸುವಂತೆ 2011ರಲ್ಲಿ ಅಧ್ಯಕ್ಷರಾಗಿದ್ದ ಆಸಿಫ್‌ ಅಲಿ ಜರ್ದಾರಿ ಅವರು ಸುಪ್ರೀಂ ಕೋರ್ಟ್‌ ಅನ್ನು ಕೋರಿದ್ದರು. 

ಲಾಹೋರ್‌ ಹೈಕೋರ್ಟ್‌ನ ವಿಚಾರಣೆ ಪ್ರಕ್ರಿಯೆ ಮತ್ತು ಪಾಕಿಸ್ತಾನ ಸುಪ್ರೀಂ ಕೋರ್ಟ್‌ನಲ್ಲಿನ ಮೇಲ್ಮನವಿಯು ನ್ಯಾಯಯುತ ವಿಚಾರಣೆಯ ಮೂಲಭೂತ ಹಕ್ಕಿನ ಅವಶ್ಯಕತೆಗಳನ್ನು ಪೂರೈಸಿರಲಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ. 

ಈ ಕುರಿತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ತಿಳಿಸಿದ ಅವರು, ‘ಸಂವಿಧಾನ ಮತ್ತು ಕಾನೂನು ಅನುಮತಿಸದ ಕಾರಣ ಭುಟ್ಟೊ ಅವರ ಮರಣದಂಡನೆಯ ತೀರ್ಪನ್ನು ಬದಲಿಸಲು ಆಗುವುದಿಲ್ಲ. ಹೀಗಾಗಿ ಅದನ್ನು ತೀರ್ಪು ಎಂದೇ ಪರಿಗಣಿಸಲಾಗುತ್ತದೆ’ ಎಂದು ಹೇಳಿದ್ದಾರೆ. 

ಭುಟ್ಟೊ ಅವರ ಸರ್ಕಾರವನ್ನು ಆಗಿನ ಮಿಲಿಟರಿ ಸರ್ವಾಧಿಕಾರಿ ಜನರಲ್‌ ಜಿಯಾವುಲ್‌ ಹಕ್‌ 1977ರಲ್ಲಿ ಉರುಳಿಸಿದ್ದರು. ಭುಟ್ಟೊ ಅವರ ಅಪರಾಧವನ್ನು ಏಳು ಸದಸ್ಯರ ಸುಪ್ರೀಂ ಕೋರ್ಟ್‌ ಪೀಠ ಎತ್ತಿಹಿಡಿದಿತ್ತು. ಆ ನಂತರ ಅವರನ್ನು ಗಲ್ಲಿಗೇರಿಸಲಾಗಿತ್ತು. ಇದರ ಹಿಂದೆ ಜಿಯಾವುಲ್‌ ಹಕ್‌ ಅವರ ಒತ್ತಡ ಕೆಲಸ ಮಾಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT