ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಮಂಡಲದ ಆಚೆ; ಅಲ್ಲೊಬ್ಬ ಚಂದಿರ ಕಂಡ

Last Updated 4 ಅಕ್ಟೋಬರ್ 2018, 12:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಖಗೋಳಶಾಸ್ತ್ರಜ್ಞರು ಸೌರಮಂಡಲದ ಹೊರಗೆ ಚಂದಿರನನ್ನು ಕಂಡಿದ್ದಾರೆ. ಗುರು ಗ್ರಹಕ್ಕಿಂತಲೂ ದೊಡ್ಡ ಗಾತ್ರದ ಅನಿಲಾವೃತ ಗ್ರಹವನ್ನು ಸುತ್ತುತ್ತಿರುವ ಅನಿಲ ಮೋಡಗಳ ಚಂದಿರ ನೆಪ್ಚೂನ್‌ನಷ್ಟು ದೊಡ್ಡದಾಗಿರುವುದಾಗಿ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಮತ್ತೊಂದು ನಕ್ಷತ್ರ ಲೋಕದಲ್ಲಿ ಕಾಣಸಿಕ್ಕಿರುವ ಮೊದಲ ಚಂದಿರ ಇದಾಗಿದೆ. ನಮ್ಮ ಸೌರಮಂಡಲದಲ್ಲಿ ಈವರೆಗೂ ಸುಮಾರು 180 ಚಂದಿರ ಅಥವಾ ಉಪಗ್ರಹಗಳನ್ನು ಗುರುತಿಸಲಾಗಿದೆ. ಸೌರಮಂಡಲದ ನಿಗದಿತ ಲಕ್ಷಣಗಳಿಗಿಂತಲೂ ಭಿನ್ನವಾಗಿರುವ ಅನ್ಯಲೋಕದ ಈ ಚಂದಿರ ಬೃಹತ್‌ ಗಾತ್ರ ಹೊಂದಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಪ್ರೊ.ಡೇವಿಡ್‌ ಕಿಪ್ಪಿಂಗ್‌ ಹೇಳಿದ್ದಾರೆ.

ಸೌರಮಂಡಲದಲ್ಲಿನ ಉಪಗ್ರಹಗಳ ಮೇಲ್ಮೈ ಕಲ್ಲು ಅಥವಾ ಮಂಜಿನಿಂದ ಆವೃತವಾಗಿದೆ. ಆದರೆ, ಪ್ರಸ್ತುತ ಗುರುತಿಸಲಾಗಿರುವ ಅನ್ಯಲೋಕದ ಚಂದಿರ ಮತ್ತು ಅದು ಪರಿಭ್ರಮಿಸುತ್ತಿರುವ ಗ್ರಹ ಬೃಹತ್‌ ಗಾತ್ರದಾಗಿದೆ ಹಾಗೂ ಅನಿಲಾವೃತವಾಗಿದೆ. ಈ ಗ್ರಹ ಮತ್ತು ಉಪಗ್ರಹಗಳು ಕೆಪ್ಲರ್‌–1625 ನಕ್ಷತ್ರ ಸುತ್ತಲೂ ಸುತ್ತುತ್ತಿದ್ದು, ಭೂಮಿಯಿಂದ 8,000 ಜ್ಯೋತಿರ್ವರ್ಷ ದೂರದಲ್ಲಿವೆ.ಕೆಪ್ಲರ್‌–1625 ಸೂರ್ಯನಷ್ಟೇ ಉಷ್ಣಾಂಶ ಹೊಂದಿದೆ ಹಾಗೂ ಸೂರ್ಯನಿಗಿಂತಲೂ ಶೇ 70ರಷ್ಟು ದೊಡ್ಡದಾಗಿದೆ.

ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಮತ್ತು ಕೆಪ್ಲರ್‌ ದೂರದರ್ಶಕಗಳ ಸಹಕಾರದಿಂದ ಈ ಚಂದಿರನನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಗುರುಗ್ರಹದ ದೈತ್ಯ ಚಂದಿರ ಗ್ಯಾನಿಮೀಡ್‌ 5,260 ಕಿ.ಮೀ. ವ್ಯಾಸ ಹೊಂದಿದೆ. ನೆಪ್ಯೂಚ್‌ ಅನಿಲಾವೃತ ಗ್ರಹದ ವ್ಯಾಸ 49,000 ಕಿ.ಮೀ. ಆಗಿದ್ದು, ಈಗ ಕಾಣ ಸಿಕ್ಕಿರುವ ಚಂದಿರ ಸಹ ಅಷ್ಟೇ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಆ ಚಂದಿರ ಅನಿಲ ಗ್ರಹದಿಂದ 30 ಲಕ್ಷ ಕಿ.ಮೀ. ದೂರದಲ್ಲಿ ಸುತ್ತುತ್ತಿರುವುದಾಗಿ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT