ಜಕಾರ್ತ: ‘ಇಂಡೊನೇಷ್ಯಾದ ಗರುಡ ವಿಮಾನಗಳಿಗೆ ಬಳಸುವ ಇಂಧನಕ್ಕೆ ಪಾಮ್ ಆಯಿಲ್ ಬೆರೆಸುವ ಪ್ರಯೋಗವು ಯಶಸ್ವಿಯಾಗಿದೆ’ ಎಂದು ಗರುಡ ಇಂಡೊನೇಷ್ಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇರ್ಫಾನ್ ಸೇತಿಯಪುತ್ರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಗರುಡ ವಿಮಾನಯಾನಕ್ಕೆ ಸೇರಿದ ಬೋಯಿಂಗ್ 737–800ಎನ್‌ಜಿ ವಿಮಾನದಲ್ಲಿ ಈ ಪ್ರಯೋಗ ನಡೆಸಲಾಗಿದೆ. ವಿಮಾನವು ಜಕಾರ್ತದಿಂದ ಜಾವಾದ ದಕ್ಷಿಣ ಭಾಗದಲ್ಲಿರುವ ಪೆಳಬುಹಾನ್ ರಾತುವರೆಗೆ 130 ಕಿ.ಮೀ. ಹಾರಾಟ ನಡೆಸಿತು. ಇದಕ್ಕೆ ಬಳಸಿದ ಇಂಧನಕ್ಕೆ ಶೇ 2.4ರಷ್ಟು ಪಾಮ್ ಆಯಿಲ್ ಬೆರೆಸಲಾಗಿತ್ತು’ ಎಂದು ತಿಳಿಸಿದ್ದಾರೆ.
‘ಈ ಪ್ರಯೋಗದಿಂದ ವಾಣಿಜ್ಯ ವಿಮಾನಗಳಲ್ಲಿ ಸುಸ್ಥಿರ ವಿಮಾನಯಾನ ಇಂಧನ ಬಳಸುವ ಹೊಸ ಮಾರ್ಗವನ್ನು ಇಂಡೊನೇಷ್ಯಾ ಕಂಡುಕೊಂಡಂತಾಗಿದೆ. ಜತೆಗೆ ಪಾಮ್ ಆಯಿಲ್ ಅನ್ನು ಇನ್ನೂ ಹಲವೆಡೆ ಬಳಸುವ ನಿಟ್ಟಿನಲ್ಲಿ ಅಧ್ಯಯನಕ್ಕೆ ಇದು ಪುಷ್ಟಿ ನೀಡಿದೆ’ ಎಂದಿದ್ದಾರೆ.
ಪಾಮ್ ಆಯಿಲ್ ಬೆರೆಸಿರುವ ಇಂಧನವನ್ನು ಕಳೆದ ಜುಲೈನಿಂದ ಪ್ರಯೋಗಿಸುತ್ತಿರುವುದಾಗಿ ಗರುಡ ಹೇಳಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಪಾಮ್ ಆಯಿಲ್ ಉತ್ಪಾದಿಸುತ್ತಿರುವ ದೇಶವಾದ ಇಂಡೊನೇಷ್ಯಾ, ಇದೀಗ ಅದರ ಬಳಕೆಯ ಹೊಸ ಆಯಾಮಗಳ ಅನ್ವೇಷಣೆ ಮತ್ತು ತೈಲ ಆಮದು ಕಡಿತಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ. 2021ರಲ್ಲೂ ವಿಮಾನ ಇಂಧನದಲ್ಲಿ ಪಾಮ್ ಆಯಿಲ್ ಬಳಕೆಯ ಪ್ರಯೋಗ ನಡೆದಿತ್ತು.