ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಯೆಟ್ನಾಂನಲ್ಲಿ ಪ್ರವಾಹ: ಮುರಿದ ಸೇತುವೆ, ಕೊಚ್ಚಿಹೋದ ಬಸ್: 59 ಮಂದಿ ಸಾವು

Published : 9 ಸೆಪ್ಟೆಂಬರ್ 2024, 13:42 IST
Last Updated : 9 ಸೆಪ್ಟೆಂಬರ್ 2024, 13:42 IST
ಫಾಲೋ ಮಾಡಿ
Comments

ಹನೋಯಿ: ವಿಯೆಟ್ನಾಂನಲ್ಲಿ ‘ಯಾಗಿ’ ಪ್ರಬಲ ಚಂಡಮಾರುತದಿಂದ ಪ್ರವಾಹ ಉಂಟಾಗಿದ್ದು, ನದಿನೀರಿನಲ್ಲಿ ಬಸ್ಸೊಂದು ಕೊಚ್ಚಿಹೋಗಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟಿನ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಪ್ರಕೃತಿ ವಿಕೋಪದಿಂದಾಗಿ ಮೃತಪಟ್ಟವರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

‘ಶನಿವಾರ ದೇಶದ ವಿವಿಧೆಡೆ ಸಂಭವಿಸಿದ ಭೂಕುಸಿತದಿಂದ 9 ಮಂದಿ, ಪ್ರವಾಹದಿಂದ 50 ಮಂದಿ ಮೃತಪಟ್ಟಿದ್ದಾರೆ’ ಎಂದು ಇಲ್ಲಿನ ಪ್ರಮುಖ ಮಾಧ್ಯಮ ‘ವಿಎನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಉತ್ತರ ವಿಯೆಟ್ನಾಂನ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಕಾವೊ ಬಾಂಗ್‌ ಪ್ರಾಂತ್ಯದಲ್ಲಿ ಸೋಮವಾರ ಬೆಳಿಗ್ಗೆ ಪ್ರವಾಹಕ್ಕೆ ಸಿಲುಕಿ 20 ಮಂದಿ ಪ್ರಯಾಣಿಸುತ್ತಿದ್ದ ಬಸ್ಸೊಂದು ಕೊಚ್ಚಿಹೋಗಿದೆ. ತಕ್ಷಣವೇ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ. ಆದರೆ, ನಿರಂತರ ಭೂಕುಸಿತದಿಂದಾಗಿ ತಂಡವು ಘಟನಾ ಸ್ಥಳ ತಲುಪುವುದು ವಿಳಂಬವಾಗಿದೆ.

ಫು–ಥೊ ಪ್ರಾಂತ್ಯದ ಫೊಂಗ್‌ ಚೌನಲ್ಲಿ ಕೆಂಪು ನದಿಗೆ ನಿರ್ಮಿಸಿದ್ದ ಉಕ್ಕಿನ ಸೇತುವೆ ಕುಸಿದುಬಿದ್ದಿದ್ದು, ಅದರ ಮೇಲೆ ಚಲಿಸುತ್ತಿದ್ದ 10 ಕಾರುಗಳು, ಎರಡು ಮೋಟರ್‌ ಬೈಕ್‌ಗಳು ಕೊಚ್ಚಿಹೋಗಿವೆ. ಮೂವರನ್ನು ತಕ್ಷಣವೇ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಮಂದಿ ಕಣ್ಮರೆಯಾಗಿದ್ದಾರೆ.

ವಹಿವಾಟಿಗೂ ಹಿನ್ನಡೆ: ‘ವಿಯೆಟ್ನಾಂನ ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಹೈಫೊಂಗ್‌ ಪ್ರಾಂತ್ಯದಲ್ಲಿ ಪ್ರವಾಹದಿಂದ ಭಾರಿ ಹಾನಿ ಸಂಭವಿಸಿದೆ. ದುಬಾರಿ ಯಂತ್ರೋಪಕರಣ ನೀರು ನುಗ್ಗಿದ್ದರಿಂದಾಗಿ ಹಾಳಾಗಿವೆ. ಸೋಮವಾರವೂ ವಿದ್ಯುತ್‌ ಪೂರೈಕೆಯಾಗದ ಕಾರಣ, ಕೈಗಾರಿಕೆಗಳು ತೆರೆದಿಲ್ಲ. ಎಂದಿನಂತೆ ಚಟುವಟಿಕೆಗಳು ಆರಂಭವಾಗಲು ಒಂದು ತಿಂಗಳು ಬೇಕಾಗಬಹುದು’ ಎಂದು ಇಲ್ಲಿನ ‘ಲಾವೊ ಡಾಂಗ್‌’ ಪತ್ರಿಕೆ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT