ಕಠ್ಮಂಡು: ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಕನಿಷ್ಠ 59 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ದೇಶದ (ನೇಪಾಳ) ಕೆಲವು ಭಾಗಗಳು ಜಲಾವೃತಗೊಂಡಿವೆ.
'ನಿರಂತರ ಮಳೆಯಿಂದಾಗಿ 59 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 34 ಮಂದಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ' ಎಂದು ನೇಪಾಳ ಪೊಲೀಸರ ಉಪ ವಕ್ತಾರ ಬಿಷ್ಣೋ ಅಧಿಕಾರಿ ತಿಳಿಸಿದ್ದಾರೆ.
ಪ್ರವಾಹದಲ್ಲಿ ಒಟ್ಟು 44 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.