ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel-Hamas War | ರಫಾ ಗಡಿ ದಾಟಿ ಈಜಿಪ್ಟ್‌ಗೆ ಬಂದ ವಿದೇಶಿ ಪ್ರಜೆಗಳು

Published 1 ನವೆಂಬರ್ 2023, 13:14 IST
Last Updated 1 ನವೆಂಬರ್ 2023, 13:14 IST
ಅಕ್ಷರ ಗಾತ್ರ

ರಫಾ/ಗಾಜಾ/ಜೆರುಸಲೇಂ: ಇಸ್ರೇಲ್–ಹಮಾಸ್ ಯುದ್ಧ ಶುರುವಾದ ನಂತರದಲ್ಲಿ, ಗಾಜಾ ಪಟ್ಟಿಯಲ್ಲಿ ಇರುವ ವಿದೇಶಿ ಪ್ರಜೆಗಳಿಗೆ ಆ ಪ್ರದೇಶವನ್ನು ತೊರೆಯಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಹತ್ತಾರು ಮಂದಿ ವಿದೇಶಿ ಪ್ರಜೆಗಳು ರಫಾ ಗಡಿಯ ಮೂಲಕ ಗಾಜಾ ಪಟ್ಟಿ ತೊರೆದು ಈಜಿಪ್ಟ್‌ ಪ್ರವೇಶಿಸಿದರು.

ವಿದೇಶಿ ಪಾಸ್‌ಪೋರ್ಟ್‌ ಹೊಂದಿರುವ 400ಕ್ಕೂ ಹೆಚ್ಚು ಜನರಿಗೆ ಗಾಜಾ ಪಟ್ಟಿ ತೊರೆಯಲು ಬುಧವಾರ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ಯಾಲೆಸ್ಟೀನ್ ಗಡಿ ಪ್ರಾಧಿಕಾರ ಹೇಳಿದೆ.

ವಿದೇಶಿ ಪಾಸ್‌ಪೋರ್ಟ್‌ ಹೊಂದಿರುವ ನೂರಾರು ಮಂದಿ ಗಾಜಾ ಪಟ್ಟಿ ತೊರೆಯುವ ಉದ್ದೇಶದಿಂದ ರಫಾ ಗಡಿಗೆ ಬರುತ್ತಿದ್ದರು. ಆದರೆ ಹಮಾಸ್, ಇಸ್ರೇಲ್ ಹಾಗೂ ಈಜಿಪ್ಟ್‌ ನಡುವೆ ಒಮ್ಮತ ಮೂಡದಿದ್ದ ಕಾರಣ ಅವರನ್ನು ಈಜಿಪ್ಟ್‌ಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಗಾಜಾ ಪಟ್ಟಿಗೆ ಇಸ್ರೇಲ್ ದಿಗ್ಬಂಧನ ವಿಧಿಸಿರುವ ಕಾರಣ, ಆ ಪ್ರದೇಶ ತೊರೆಯಲು ಉಳಿದಿರುವ ಮಾರ್ಗ ಈಜಿಪ್ಟ್‌ ಗಡಿಗೆ ಹೊಂದಿಕೊಂಡಿರುವ ರಫಾ ಮಾತ್ರ.

ಗಾಯಗೊಂಡಿರುವ 80ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರನ್ನು ಗಾಜಾದಿಂದ ಈಜಿಪ್ಟ್‌ಗೆ ಚಿಕಿತ್ಸೆಗೆ ಕರೆತರಲಾಗುವುದು ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಪ್ಯಾಲೆಸ್ಟೀನ್ ನಿರಾಶ್ರಿತರು ಗಾಜಾ ಪಟ್ಟಿಯಿಂದ ತನ್ನಲ್ಲಿಗೆ ಬರಲು ಅವಕಾಶ ಕೊಡುವುದಿಲ್ಲ ಎಂದು ಈಜಿಪ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ನಿರಾಶ್ರಿತರಿಗೆ ಒಮ್ಮೆ ನೆಲೆ ಕಲ್ಪಿಸಿದರೆ, ಅವರಿಗೆ ಯುದ್ಧದ ನಂತರ ಮತ್ತೆ ಗಾಜಾ ಪಟ್ಟಿಗೆ ತೆರಳಲು ಇಸ್ರೇಲ್ ಅವಕಾಶ ಕೊಡುವುದೇ ಇಲ್ಲ ಎಂಬುದು ಈಜಿಪ್ಟ್‌ನ ವಾದ.

ಒತ್ತೆಯಾಳುಗಳಾಗಿ ಇರುವ ಕೆಲವು ವಿದೇಶಿ ಪ್ರಜೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹಮಾಸ್‌ ಬಂಡುಕೋರರು ಮಧ್ಯಸ್ಥಿಕೆದಾರರಲ್ಲಿ ಹೇಳಿದ್ದಾರೆ. ಈ ನಡುವೆ, ಹೇಗ್‌ನಲ್ಲಿ ಇರುವ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿರುವ ಕೆಲವು ಇಸ್ರೇಲಿಯರು, ಹಮಾಸ್‌ ಬಂಡುಕೋರರು ಅಕ್ಟೋಬರ್ 7ರಂದು ನಡೆಸಿದ ಹತ್ಯೆ ಹಾಗೂ ಅಪಹರಣಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದಾರೆ. ಆದರೆ, ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ಸದಸ್ಯ ರಾಷ್ಟ್ರವಲ್ಲ.

ಇಸ್ರೇಲ್‌ ಬಹಿಷ್ಕರಿಸಲು ಇರಾನ್ ಕರೆ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ನ ದಾಳಿ ನಿಲ್ಲಸಬೇಕು ಎಂದಾದರೆ, ವಿಶ್ವದ ಮುಸ್ಲಿಂ ದೇಶಗಳು ಇಸ್ರೇಲ್‌ಗೆ ತೈಲ ಮತ್ತು ಆಹಾರ ರಫ್ತು ಮಾಡುವುದನ್ನು ನಿಲ್ಲಿಸಬೇಕು ಎಂದು ಇರಾನ್‌ನ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಕರೆ ನೀಡಿದ್ದಾರೆ.

ಏಳು ಮಂದಿ ಒತ್ತೆಯಾಳು ಬಲಿ

ಗಾಜಾ ಪಟ್ಟಿ: ಗಾಜಾದಲ್ಲಿನ ನಿರಾಶ್ರಿತರ ಅತಿದೊಡ್ಡ ಶಿಬಿರದ ಮೇಲೆ ನಡೆದ ಇಸ್ರೇಲ್ ಬಾಂಬ್ ದಾಳಿಯಲ್ಲಿ ಏಳು ಮಂದಿ ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎಂದು ಹಮಾಸ್ ಬುಧವಾರ ಹೇಳಿದೆ. ಮೃತಪಟ್ಟವರಲ್ಲಿ ಮೂರು ಮಂದಿ ವಿದೇಶಿ ಪ್ರಜೆಗಳು.

ಜಬಾಲಿಯಾ ಶಿಬಿರದಲ್ಲಿ ಈ ಒತ್ತೆಯಾಳುಗಳು ಇದ್ದರು. ಇಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮಿಲಿಟರಿಯ ಪ್ರಮುಖ ಇಬ್ರಾಹಿಂ ಬಿಯಾರಿ ಎಂಬುವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ‘ಇವರು ಬಹಳ ಪ್ರಮುಖ ವ್ಯಕ್ತಿ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಯೋಜನೆ ರೂಪಿಸಿ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

ಜಬಾಲಿಯಾ ಶಿಬಿರದ ಮೇಲಿನ ದಾಳಿಯಲ್ಲಿ ಕನಿಷ್ಠ 50 ಮಂದಿ ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಸಾವಿರಕ್ಕೂ ಹೆಚ್ಚು ಸಾವು

ಯುದ್ಧ ಶುರುವಾದ ನಂತರದಲ್ಲಿ ಗಾಜಾ ಪಟ್ಟಿಯಲ್ಲಿ 8,525ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ.

ವೆಸ್ಟ್‌ ಬ್ಯಾಂಕ್ ಪ್ರದೇಶದಲ್ಲಿ 122ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಸತ್ತಿದ್ದಾರೆ. ಇಸ್ರೇಲ್‌ನಲ್ಲಿ ಒಟ್ಟು 1,400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT