ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಗಾಜಾ ಪಟ್ಟಿ: ವಿದೇಶಿ ಪ್ರಜೆಗಳಿಗೆ ತೆರೆದ ರಫಾ ಗಡಿ

Published 1 ನವೆಂಬರ್ 2023, 9:41 IST
Last Updated 1 ನವೆಂಬರ್ 2023, 9:41 IST
ಅಕ್ಷರ ಗಾತ್ರ

ಗಾಜಾ: ಯುದ್ಧ ಪೀಡಿತ ಗಾಜಾದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರಜೆಗಳು ಮತ್ತು ಗಾಯಗೊಂಡವರು ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ಹೋಗಲು ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿದೆ.

ರಫಾ ಮಾರ್ಗವು ಇಸ್ರೇಲ್‌ ನಿಯಂತ್ರಣದಲ್ಲಿರದ ಏಕೈಕ ಗಡಿ ಮಾರ್ಗವಾಗಿದೆ. ಇಸ್ರೇಲ್‌– ಹಮಾಸ್‌ ನಡುವೆ ಸಂಘರ್ಷ ಆರಂಭವಾದಾಗಿನಿಂದ ಈ ಮಾರ್ಗ ಸ್ಥಗಿತಗೊಂಡಿದೆ.

ಇದೀಗ ಕತಾರ್‌ ಮಧ್ಯಸ್ಥಿಕೆ ಯಶಸ್ವಿಯಾಗಿದ್ದು, ವಿದೇಶಿ ಪಾಸ್‌ಪೋರ್ಟ್‌ ಹೊಂದಿರುವವರು ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ತಲುಪುವ ಒಪ್ಪಂದಕ್ಕೆ ಇಸ್ರೇಲ್‌, ಹಮಾಸ್‌ ಮತ್ತು ಈಜಿಪ್ಟ್‌ ಸಮ್ಮತಿ ನೀಡಿವೆ. ಎಷ್ಟು ಸಮಯದವರೆಗೆ ಈ ಮಾರ್ಗ ತೆರೆದಿರುತ್ತದೆ ಎಂಬುವುದರ ಬಗ್ಗೆ ಮಾಹಿತಿಯಿಲ್ಲ.

ಈ ಒಪ್ಪಂದವು ವಿದೇಶಿ ಪ್ರಜೆಗಳ ಗಡಿ ದಾಟುವಿಕೆಗೆ ಮಾತ್ರ ಸೀಮಿತವಾಗಿದೆ. ಇತರ ವಿಷಯಗಳಾದ ಹಮಾಸ್‌ನಿಂದ ಒತ್ತೆಯಾಳುಗಳ ಬಿಡುಗಡೆ, ಮಾನವೀಯ ನೆಲೆಯಲ್ಲಿ ಗಾಜಾಕ್ಕೆ ನೀರು, ಆಹಾರ, ಇಂಧನ ಒದಗಿಸುವ ಬಗ್ಗೆ ಈ ಒಪ್ಪಂದದಲ್ಲಿ ಚರ್ಚೆಯಾಗಿಲ್ಲ ಎಂದು ತಿಳಿದುಬಂದಿದೆ.

ಕದನ ವಿರಾಮ ಘೋಷಣೆ ಇಲ್ಲ

ಗಾಜಾದ ಉತ್ತರ ಭಾಗವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ತನ್ನ ದಾಳಿ ಮುಂದುವರಿಸಿದೆ. ದಾಳಿಗೆ ಬೆದರಿದ ಅಂದಾಜು 8 ಲಕ್ಷ ಪ್ಯಾಲೆಸ್ಟೀನ್ ನಾಗರಿಕರು ಉತ್ತರ ಭಾಗದಿಂದ ದಕ್ಷಿಣಕ್ಕೆ ಪಲಾಯನ ಮಾಡಿದ್ದಾರೆ. ಗಾಜಾದಲ್ಲಿ ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಏತನ್ಮಧ್ಯೆ ಕದನ ವಿರಾಮ ಘೋಷಿಸಬೇಕು ಎಂಬ ಆಗ್ರಹಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಹಮಾಸ್ ಸಂಘಟನೆಯನ್ನು ನಾಶಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT