ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel-Hamas Conflict | ಗಾಜಾ ಪಟ್ಟಿ ಪ್ರವೇಶಿಸಿದ ನೆರವು ಸಾಮಗ್ರಿ

Published 21 ಅಕ್ಟೋಬರ್ 2023, 15:53 IST
Last Updated 21 ಅಕ್ಟೋಬರ್ 2023, 15:53 IST
ಅಕ್ಷರ ಗಾತ್ರ

ರಫಾ (ಗಾಜಾ ಪಟ್ಟಿ): ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ಟೀನ್‌ ನಾಗರಿಕರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಲು ಈಜಿಪ್ಟ್‌ ಮತ್ತು ಗಾಜಾ ಪಟ್ಟಿಯ ನಡುವಿನ ರಫಾ ಗಡಿಯನ್ನು ಶನಿವಾರ ಮುಕ್ತವಾಗಿಸಲಾಯಿತು. ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಈ ಗಡಿಯನ್ನು ಬಂದ್ ಮಾಡಲಾಗಿತ್ತು.

ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ಟೀನ್ ನಾಗರಿಕರು ಈಗ ಆಹಾರ ವಸ್ತುಗಳನ್ನು ಬಹಳ ಮಿತವಾಗಿ ಬಳಸುತ್ತಿದ್ದಾರೆ. ಕೊಳಕು ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದೆ. ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳ ದಾಸ್ತಾನು ಖಾಲಿಯಾಗುತ್ತಿದೆ. ವಿದ್ಯುತ್‌ ಜನರೇಟರ್‌ಗಳಿಗೆ ಇಂಧನ ಸಿಗುತ್ತಿಲ್ಲ.

ಶನಿವಾರ 20 ಟ್ರಕ್ಕುಗಳನ್ನು ಮಾತ್ರ ಗಾಜಾ ಪಟ್ಟಿಯೊಳಕ್ಕೆ ಬಿಡಲಾಗಿದೆ. ಆದರೆ, ಇಷ್ಟು ಟ್ರಕ್ಕುಗಳಲ್ಲಿ ಇರುವ ಅಗತ್ಯ ವಸ್ತುಗಳು ಗಾಜಾ ಪಟ್ಟಿಯ ಜನರ ಬೇಡಿಕೆಯನ್ನು ಪೂರೈಸಲು ಏನೇನೂ ಸಾಲದು ಎಂದು ನೆರವು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂದಾಜು ಮೂರು ಸಾವಿರ ಟನ್‌ಗಳಷ್ಟು ಅಗತ್ಯ ವಸ್ತುಗಳನ್ನು ಹೊತ್ತ 200ಕ್ಕೂ ಹೆಚ್ಚು ಟ್ರಕ್‌ಗಳು ಗಾಜಾ ಪಟ್ಟಿಯ ಗಡಿಯಲ್ಲಿ ನಿಂತಿವೆ. ಇದೇ ಹೊತ್ತಿನಲ್ಲಿ, ಗಾಜಾ ಪಟ್ಟಿಯಲ್ಲಿ ಸಿಲುಕಿಕೊಂಡಿರುವ, ವಿದೇಶಿ ಪಾಸ್‌ಪೋರ್ಟ್‌ ಹೊಂದಿರುವವರು ಅಲ್ಲಿಂದ ಹೊರಹೋಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ರಫಾ ಗಡಿಯ ಪ್ರಮುಖ ದ್ವಾರದ ಮೂಲಕ ಟ್ರಕ್ಕುಗಳು ಸಾಗಿದಾಗ, ನೆರವು ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಹಮಾಸ್ ಬಂಡುಕೋರರು ಅಮೆರಿಕದ ಇಬ್ಬರು ಪ್ರಜೆಗಳನ್ನು ಬಿಡುಗಡೆ ಮಾಡಿದ ನಂತರದಲ್ಲಿ ಈ ಗಡಿಯನ್ನು ಅಗತ್ಯ ವಸ್ತುಗಳ ಪೂರೈಕೆಗೆ ತೆರೆಯಲಾಯಿತು. ಆದರೆ ಒತ್ತೆಯಾಳುಗಳ ಬಿಡುಗಡೆಗೂ ಅಗತ್ಯ ವಸ್ತುಗಳನ್ನು ಸಾಗಿಸಲು ಅವಕಾಶ ಕಲ್ಪಿಸಿದ್ದಕ್ಕೂ ನೇರ ಸಂಬಂಧ ಇದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಇಸ್ರೇಲ್ ಮಿಲಿಟರಿಯು ಗಾಜಾದ ಉದ್ದಕ್ಕೂ ವಾಯುದಾಳಿಯನ್ನು ಮುಂದುವರಿಸಿದೆ. ಹಮಾಸ್ ಬಂಡುಕೋರರು ಇಸ್ರೇಲ್ ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸುತ್ತಿದ್ದಾರೆ.

ಗಾಜಾ ನಗರದಲ್ಲಿ ಇರುವ ಅಲ್–ಕುದ್ಸ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಆಗಬಹುದು ಎಂಬ ಬೆದರಿಕೆಯು ಇಸ್ರೇಲ್ ಕಡೆಯಿಂದ ಬಂದಿದೆ ಎಂದು ಪ್ಯಾಲೆಸ್ಟೀನ್ ರೆಡ್‌ ಕ್ರೆಸೆಂಟ್ ಸೊಸೈಟಿ ಹೇಳಿದೆ. ಈ ಆಸ್ಪತ್ರೆಯ ಕಟ್ಟಡವನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಇಸ್ರೇಲ್ ಸೂಚಿಸಿದೆ ಎಂದು ಸೊಸೈಟಿ ಹೇಳಿದೆ. ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚಿನ ರೋಗಿಗಳು, ಸಹಸ್ರಾರು ಮಂದಿ ನಿರಾಶ್ರಿತರು ಇದ್ದಾರೆ.

ಯುದ್ಧ ಆರಂಭವಾಗುವ ಮೊದಲು ಪ್ರತಿನಿತ್ಯ 400 ಟ್ರಕ್ಕುಗಳು ಗಾಜಾಕ್ಕೆ ಬರುತ್ತಿದ್ದವು. ಈಗ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿಗೆ ಇನ್ನೂ ಹಲವು ಟ್ರಕ್ಕುಗಳಷ್ಟು ನೆರವು ವಸ್ತುಗಳ ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಮುಖ್ಯಸ್ಥೆ ಸಿಂಡಿ ಮೆಕ್‌ಕೇನ್ ಹೇಳಿದ್ದಾರೆ.

ದಕ್ಷಿಣದ ಪ್ರದೇಶಗಳಿಗೆ ಮಾತ್ರ ನೆರವು

ಗಾಜಾ ಪಟ್ಟಿಯನ್ನು ಪ್ರವೇಶಿಸಿರುವ ಅಗತ್ಯ ವಸ್ತುಗಳು ದಕ್ಷಿಣ ಭಾಗಕ್ಕೆ ಮಾತ್ರ ಸೀಮಿತ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಗಾಜಾ ಪಟ್ಟಿಯ ಉತ್ತರ ಭಾಗವನ್ನು ತೊರೆಯಬೇಕು ಎಂದು ಅಲ್ಲಿನ ನಿವಾಸಿಗಳಿಗೆ ಇಸ್ರೇಲ್ ಈ ಹಿಂದೆಯೇ ಸೂಚನೆ ನೀಡಿತ್ತು. ಈಗ ಸಿಗುತ್ತಿರುವ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಂಧನ ಇಲ್ಲ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. ಹಮಾಸ್ ಬಳಿ ಇರುವ ಒತ್ತೆಯಾಳುಗಳ ಸಂಖ್ಯೆ 210 ಎಂದು ಅವರು ತಿಳಿಸಿದ್ದಾರೆ.

  • 44 ಸಾವಿರ ಬಾಟಲಿ ಕುಡಿಯುವ ನೀರನ್ನು ಗಾಜಾ ಪಟ್ಟಿಯೊಳಕ್ಕೆ ಕಳುಹಿಸಲಾಗಿದೆ. ಇದು 22 ಸಾವಿರ ಮಂದಿಗೆ ಒಂದು ದಿನಕ್ಕೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.

  • ವೈದ್ಯಕೀಯ ನೆರವು ವಸ್ತುಗಳನ್ನು ಕೂಡ ಗಾಜಾ ಪಟ್ಟಿಗೆ ಕಳುಹಿಸಲಾಗಿದೆ. ರಫಾ ಗಡಿಯನ್ನು ಮುಕ್ತವಾಗಿ ಇರಿಸಬೇಕು ಎಂದು ಅಮೆರಿಕ ಕೋರಿದೆ. ನೆರವು ವಸ್ತುಗಳನ್ನು ಹಮಾಸ್ ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.

  • ಹಮಾಸ್‌ ಸಂಘಟನೆ ಇಸ್ರೇಲ್‌ ಮೇಲೆ ನಡೆಸಿರುವ ದಾಳಿಯು, ಪ್ಯಾಲೆಸ್ಟೀನ್‌ ನಾಗರಿಕೆಗೆ ಸಾಮೂಹಿಕವಾಗಿ ಶಿಕ್ಷೆ ವಿಧಿಸಲು ಸಮರ್ಥನೆ ಆಗುವುದೇ ಇಲ್ಲ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT