ಬೆಂಗಳೂರು: ಬಾಂಗ್ಲಾದೇಶದಲ್ಲಿ ಅರಾಜಕತೆಯಿಂದ ಉಂಟಾಗಿರುವ ಹಿಂಸಾಚಾರದಲ್ಲಿ ಬಾಂಗ್ಲಾದೇಶ ಮಾಜಿ ಕ್ರಿಕೆಟರ್ ಹಾಗೂ ಅವಾಮಿ ಲೀಗ್ ಪಕ್ಷದ ಸಂಸದ ಮಶ್ರಫೆ ಮೊರ್ತಜಾ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.
ಕುಲ್ನಾ ವಲಯದ ನರಾಲಿಯಲ್ಲಿನ ಮೊರ್ತಜಾ ಅವರ ಮನೆಗೆ ಸೋಮವಾರ ಬೆಂಕಿ ಇಟ್ಟು ಹಾನಿಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವೆಬ್‌ಸೈಟ್ ಸ್ಥಳೀಯ ಮಾಧ್ಯಮಗಳನ್ನು ಆಧರಿಸಿ ವರದಿ ಮಾಡಿದೆ.
ನರಾಲಿ–2 ಲೋಕಸಭಾ ಕ್ಷೇತ್ರದಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷದಿಂದ ಮೊರ್ತಜಾ ಅವರು ಗೆದ್ದಿದ್ದರು.
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕರಾಗಿದ್ದ ಅವರು 117 ಪಂದ್ಯಗಳನ್ನು ಮುನ್ನಡೆಸಿದ್ದರು. 220 ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್, 54 ಟಿ20 ಪಂದ್ಯಗಳನ್ನು ಆಡಿದ್ದರು. 2018ರಲ್ಲಿ ಅವಾಮಿ ಲೀಗ್ ಸೇರಿದ್ದರು.
ಇನ್ನೊಂದೆಡೆ ಪ್ರತಿಭಟನೆಗಳಿಗೆ ಮಣಿದು ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಹೋದರೂ ಪ್ರತಿಭಟನಾಕಾರರು ಹಿಂಸಾಚಾರ ಮುಂದುವರೆಸಿದ್ದಾರೆ. ಅವಾಮಿ ಲೀಗ್ ಮುಖಂಡರು, ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ.