ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಪಟ್ಟಿ ಮೇಲೆ ಸಂಪೂರ್ಣ ದಿಗ್ಬಂಧನ ಹೇರಲು ಇಸ್ರೇಲ್ ರಕ್ಷಣಾ ಸಚಿವ ಆದೇಶ

Published 9 ಅಕ್ಟೋಬರ್ 2023, 13:49 IST
Last Updated 9 ಅಕ್ಟೋಬರ್ 2023, 13:49 IST
ಅಕ್ಷರ ಗಾತ್ರ

ಜೆರುಸಲೇಂ: ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯ ಸುತ್ತ ಮುತ್ತಿಗೆಹಾಕಿ, ಸಂಪೂರ್ಣ ದಿಗ್ಬಂಧನ ಹೇರಲು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಆದೇಶಿಸಿದ್ದಾರೆ.

‘ಗಾಜಾ ಪ್ರದೇಶಕ್ಕೆ ವಿದ್ಯುತ್‌, ಆಹಾರ ಮತ್ತು ಇಂಧನ ಪೂರೈಕೆ ನಿಲ್ಲಿಸುತ್ತೇವೆ. ನಾವು ಹೋರಾಡುತ್ತಿರುವುದು ಭಯೋತ್ಪಾದಕರ ವಿರುದ್ಧ, ಅದಕ್ಕೆ ಅನುಗುಣವಾಗಿ ಪ್ರತ್ಯುತ್ತರ ನೀಡುತ್ತೇವೆ’ ಎಂದು ಗುಡುಗಿದ್ದಾರೆ.

ಗಾಜಾ ಪ್ರದೇಶವು ತನ್ನ ಮೂಲಭೂತ ಅಗತ್ಯಗಳಿಗಾಗಿ ಇಸ್ರೇಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಸ್ರೇಲ್‌ನ ಈ ನಿರ್ಧಾರವು 23 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ.

ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವಿನ ಸಮರದ ಮೂರನೇ ದಿನವಾದ ಮಂಗಳವಾರವೂ ಆಗಸದಲ್ಲಿ ಯುದ್ಧ ವಿಮಾನಗಳು ಗರ್ಜನೆ ಮುಂದುವರಿದಿತ್ತು. ಹಮಾಸ್‌ ಬಂಡುಕೋರರು ಜೆರುಸಲೇಂನತ್ತಲೂ ರಾಕೆಟ್‌ ದಾಳಿ ನಡೆಸುತ್ತಿದ್ದರು. ಜೆರುಸಲೇಂನಲ್ಲಿ ವಾಯು ದಾಳಿಯ ಸೈರನ್‌ಗಳು ಮೊಳಗಿದವು ಮತ್ತು ಸ್ಫೋಟದ ಶಬ್ದ ಕೇಳಿಬರುತ್ತಿತ್ತು.

ಇಸ್ರೇಲ್ ಈ ದಾಳಿಯನ್ನು ಅಮೆರಿಕದ ಮೇಲೆ ನಡೆದ ‘9/11’ ದಾಳಿಗೆ ಹೋಲಿಸಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ನೂರಕ್ಕೂ ಹೆಚ್ಚು ಇಸ್ರೇಲ್‌ ಪ್ರಜೆಗಳನ್ನು ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.  

ಮೂರು ದಿನಗಳಲ್ಲಿ ಇಸ್ರೇಲ್‌ನಲ್ಲಿ 800ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಸತ್ತವರ ಸಂಖ್ಯೆ 560ಕ್ಕೆ ಏರಿದೆ ಎಂದು ಪ್ಯಾಲೆಸ್ಟೀನ್‌ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಒಂಬತ್ತು ಪ್ರಜೆಗಳು ಸಾವಿಗೀಡಾಗಿದ್ದಾರೆ ಎಂದು ಅಮೆರಿಕ‌ ದೃಢಪಡಿಸಿದೆ  ಎಂದು ಎನ್‌ಡಿಟಿವಿ ವರದಿ ಹೇಳಿದೆ.

‘ರಾತ್ರಿಯಿಡೀ ಐಡಿಎಫ್ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ವಿಮಾನಗಳು ಮತ್ತು ಫಿರಂಗಿಗಳು ಗಾಜಾ ಪಟ್ಟಿಯಲ್ಲಿರುವ 500ಕ್ಕೂ ಹೆಚ್ಚು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದವು. ಲೆಬನಾನ್ ನಿಂದ ಒಳನುಸುಳಿದ್ದ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ’ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಹೇಳಿಕೆ ತಿಳಿಸಿದೆ.

ಹಮಾಸ್ ತಾಣಗಳಿಂದ ದೂರವಿರುವಂತೆ ಗಾಜಾ ನಾಗರಿಕರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

50 ತಾಸಿಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯ ನಂತರ, ಗಾಜಾ ಗಡಿ ಪಟ್ಟಣಗಳ ನಿಯಂತ್ರಣವನ್ನು ಮರಳಿ ಪಡೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆದರೆ, ಒಳನುಸುಳಿರುವ ಕೆಲವು ಉಗ್ರರು ಕೆಲವೆಡೆ ಉಳಿದಿರಬಹುದು ಎಂದು ಹೇಳಿದೆ.

‘ನಾವು ಇಂದು ದುಷ್ಟರ ಮುಖಗಳನ್ನು‌ ನೋಡಿದ್ದೇವೆ. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಹಮಾಸ್ ಕ್ರೂರ ದಾಳಿ ನಡೆಸುತ್ತಿದೆ. ಹಮಾಸ್ ತಾನು ಮಾಡಿದ ತಪ್ಪನ್ನು ಬಹುಬೇಗ ಅರ್ಥಮಾಡಿಕೊಳ್ಳುತ್ತದೆ. ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಮುಂದಿನ 50 ವರ್ಷಗಳ ವಾಸ್ತವವನ್ನು ನಾವು ಬದಲಾಯಿಸುತ್ತೇವೆ. ಮೊದಲು ಇದ್ದದ್ದು ಇನ್ನು ಮುಂದೆ ಇರುವುದಿಲ್ಲ. ಪೂರ್ಣ ಬಲದೊಂದಿಗೆ ಕಾರ್ಯನಿರ್ವಹಿಸುತ್ತೇವೆ’ ಎಂದು ಗ್ಯಾಲಂಟ್ ಪ್ರತಿಪಾದಿಸಿದರು.

ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ನಾಲ್ವರು ಇಸ್ರೇಲ್‌ ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎಂದು ಹಮಾಸ್‌ನ  ಇಝ್ ಅದ್-ದಿನ್ ಅಲ್-ಖಸ್ಸಾಮ್ ಬ್ರಿಗೇಡ್‌ ವಕ್ತಾರ ಅಬು ಒಬೇದಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT