ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಅಮೆರಿಕದ ರಾಯಭಾರ ಕಚೇರಿಯ ಗೋಪ್ಯ ರಾಜತಾಂತ್ರಿಕ ಕೇಬಲ್ ವಿಷಯ ಬಹಿರಂಗಪಡಿಸಿರುವುದಕ್ಕೆ ಖಾನ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಸೈಫರ್ ಪ್ರಕರಣ ದಾಖಲಿಸಿರುವ ಸಂಗತಿ ಶುಕ್ರವಾರ ಹೊರಬಿದ್ದಿದೆ.
70 ವರ್ಷದ ಖಾನ್ ಅವರು ಈ ತಿಂಗಳ ಆರಂಭದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದು, ಸದ್ಯ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷರ ವಿರುದ್ಧದ ಸೈಫರ್ ಪ್ರಕರಣದಲ್ಲಿ ಅಧಿಕೃತ ರಹಸ್ಯ ಕಾಯ್ದೆ 1923ರ ಸೆಕ್ಷನ್ 5 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರ ವಿರುದ್ಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ತನಿಖೆ ನಡೆಸುತ್ತಿದೆ’ ಎಂದು ಹೆಸರು ಹೇಳಲು ಬಯಸದ ಮೂಲಗಳನ್ನು ಉಲ್ಲೇಖಿಸಿ ‘ಜಿಯೋ ನ್ಯೂಸ್’ ವರದಿ ಮಾಡಿದೆ.
ಸೈಫರ್ (ವರ್ಗೀಕೃತ ರಾಜತಾಂತ್ರಿಕ ದಾಖಲೆ) ದುರುಪಯೋಗದಲ್ಲಿ ಇಮ್ರಾನ್ ಖಾನ್ ಅವರು ಉದ್ದೇಶಪೂರ್ವಕವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದ ನಂತರ ಎಫ್‌ಐಎಯ ಭಯೋತ್ಪಾದನಾ ನಿಗ್ರಹ ವಿಭಾಗವು ಪ್ರಕರಣ ದಾಖಲಿಸಿದೆ ಎಂದು ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.