ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಷಾಖಾನ ಪ್ರಕರಣ: ಶಿಕ್ಷೆ ಪ್ರಶ್ನಿಸಿದ ಇಮ್ರಾನ್‌ ಅರ್ಜಿ ವಿಚಾರಣೆ ಪುನರಾರಂಭ

Published 28 ಆಗಸ್ಟ್ 2023, 16:23 IST
Last Updated 28 ಆಗಸ್ಟ್ 2023, 16:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ತೋಷಾಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಸೋಮವಾರ ಪುನರಾರಂಭಿಸಿತು.   

ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದ್ದು, ಎರಡೂ ಕಡೆಯ ವಕೀಲರು ಸಹ ನ್ಯಾಯಾಲಯದಲ್ಲಿ ಹಾಜರಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಚುನಾವಣಾ ಆಯೋಗ ಪ್ರತಿನಿಧಿಸುವ ವಕೀಲ ಅಮ್ಜದ್ ಪರ್ವೇಜ್ ಅನಾರೋಗ್ಯದ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇದರಿಂದ ವಿಭಾಗೀಯ ನ್ಯಾಯಪೀಠವು ವಿಚಾರಣೆಯನ್ನು ಶುಕ್ರವಾರ ಮುಂದೂಡಿತ್ತು. ವಕೀಲರು ಪದೇ ಪದೇ  ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠವು ವಿಚಾರಣೆಗೆ ಯಾರೂ ಹಾಜರಾಗದಿದ್ದರೂ ಸೋಮವಾರ ಪ್ರಕರಣ ಇತ್ಯರ್ಥಪಡಿಸುವುದಾಗಿ ಪ್ರಕಟಿಸಿತ್ತು. ಅರ್ಜಿಯ ವಿಚಾರಣೆಯನ್ನು ಆ.22ರಂದು ಪೀಠ ಆರಂಭಿಸಿತ್ತು.

ಈ ಪ್ರಕರಣದಲ್ಲಿ ಇಸ್ಲಾಮಾಬಾದ್‌ ವಿಚಾರಣಾ ನ್ಯಾಯಾಲಯವು ಪಾಕಿಸ್ತಾನ್‌ –ಎ– ಇನ್ಸಾಫ್‌ (ಪಿಟಿಐ) ಅಧ್ಯಕ್ಷರೂ ಆದ ಖಾನ್‌ ಅವರಿಗೆ ಆಗಸ್ಟ್‌ 5ರಂದು ಶಿಕ್ಷೆ ವಿಧಿಸಿದ್ದು, ಸದ್ಯ ಖಾನ್‌ ಅವರು ಅಟಾಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

2018-2022 ಅವಧಿಯಲ್ಲಿ ಸರ್ಕಾರದ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಖಾನ್‌ ಶಿಕ್ಷೆಗೆ ಗುರಿಯಾಗಿದ್ದಾರೆ. ಮುಂಬರುವ ಚುನಾವಣೆಗೆ ಸ್ಪರ್ಧಿಸದಂತೆ ಐದು ವರ್ಷಗಳ ಕಾಲ ಅವರನ್ನು ರಾಜಕೀಯ ಕ್ಷೇತ್ರದಿಂದಲೂ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT