ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಮಾಸ್ಕಸ್’ ದಾಳಿಗೆ ಇರಾನ್ ಪ್ರತೀಕಾರದ ಸಂಭವ: ಇಸ್ರೇಲ್, ಅಮೆರಿಕ ಹೈ ಅಲರ್ಟ್

ಏಪ್ರಿಲ್ 2ರಂದು ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, 11 ಜನರನ್ನು ಹತ್ಯೆ ಮಾಡಿತ್ತು.
Published 6 ಏಪ್ರಿಲ್ 2024, 5:29 IST
Last Updated 6 ಏಪ್ರಿಲ್ 2024, 5:29 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ಡಮಾಸ್ಕಸ್’ ದಾಳಿಗೆ ಕೆರಳಿ ಕೆಂಡವಾಗಿರುವ ಇರಾನ್. ಇಸ್ರೇಲ್‌ಗೆ ಪೆಟ್ಟು ಕೊಡಲು ತಯಾರಿ ನಡೆಸಿದ್ದು ಸಂಭವನೀಯ ಅಪಾಯದ ಬಗ್ಗೆ ಅಮೆರಿಕ ಹಾಗೂ ಇಸ್ರೇಲ್ ಹೈಅಲರ್ಟ್ ಘೋಷಿಸಿವೆ.

ಏಪ್ರಿಲ್ 2ರಂದು ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, 11 ಜನರನ್ನು ಹತ್ಯೆ ಮಾಡಿತ್ತು.

‘ಇಸ್ರೇಲ್ ದಾಳಿಗೆ ಇರಾನ್ ಪ್ರತೀಕಾರ ತೆಗೆದುಕೊಳ್ಳುವ ಸಂಭವ ಇದ್ದು, ಮಧ್ಯಪ್ರಾಚ್ಯದಲ್ಲಿನ ತನ್ನ ಮಿಲಿಟರಿ ಹಾಗೂ ರಾಯಭಾರ ಅಧಿಕಾರಿಗಳಿಗೆ ಅಮೆರಿಕ ಹೈ ಅಲರ್ಟ್ ನೀಡಿದೆ. ಅಲ್ಲದೇ ಇಸ್ರೇಲ್, ರಜೆ ಮೇಲೆ ಹೋಗಿರುವ ತನ್ನ ಸೇನಾಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿದ್ದು ಎಲ್ಲ ಸೇನಾ ಸಿಬ್ಬಂದಿಗೂ ರಜೆಗಳನ್ನು ರದ್ದು ಮಾಡಿದೆ. ಜಿಪಿಎಸ್ ಸಿಗ್ನಲ್‌ಗಳನ್ನು ಸ್ಥಗಿತಗೊಳಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

‘ಡಮಾಸ್ಕಸ್ ದಾಳಿಗೆ ನೇರವಾಗಿ ಪ್ರತಿಕ್ರಿಯಿಸಲು ಇರಾನ್ ಸಿದ್ದವಾಗಿದೆ. ತನ್ನ ಎಲ್ಲ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸಿದ್ಧವಾಗಿರಲು ಸೂಚಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಇರಾನ್‌ನ ಉನ್ನತ ಅಧಿಕಾರಿಗಳು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ರಾಯಭಾರ ಕಚೇರಿ ಮೇಲಿನ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ ಗಾರ್ಡ್‌ನ 7 ಸದಸ್ಯರು ಮೃತರಾಗಿದ್ದರು. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಮೃತರ ಅಂತ್ಯಕ್ರಿಯೆ ಶುಕ್ರವಾರ ಟೆಹರಾನ್‌ನಲ್ಲಿ ನಡೆಯಿತು. ಈ ವೇಳೆ ಇರಾನ್ ಸೇನೆಯ ಉನ್ನತಾಧಿಕಾರಿಗಳು ಪ್ರತೀಕಾರದ ಶಪಥ ಮಾಡಿ ಈ ವಿಚಾರದಲ್ಲಿ ಅಮೆರಿಕ ಸುಮ್ಮನಿರುವುದು ಉತ್ತಮ ಎಂದು ಗುಡುಗಿದ್ದಾರೆ.

ಪ್ಯಾಲೇಸ್ಟಿನ್‌ನ ಹಮಾಸ್ ಮೇಲೆ ಯುದ್ಧ ಘೋಷಿಸಿರುವ ಇಸ್ರೇಲ್, ಹಮಾಸ್ ಉಗ್ರರನ್ನು ಸರ್ವನಾಶ ಮಾಡುವುದಾಗಿ ಗಾಜಾದಲ್ಲಿ ದಾಳಿ ಮುಂದುರೆಸಿದೆ. ಇದಲ್ಲದೇ ಹಮಾಸ್‌ಗೆ ಸಹಾಯ ಮಾಡುವ ನೆರೆಹೊರೆಯವರಿಗೂ ಇಸ್ರೇಲ್ ಬಿಸಿ ಮುಟ್ಟಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT