ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನ್‌ ಯೂನಿಸ್‌: ಜನರ ಸ್ಥಳಾಂತರಕ್ಕೆ ಆದೇಶಿಸಿದ ಇಸ್ರೇಲ್‌

ಹಮಾಸ್‌ ಮುಖಂಡರ ಗುರಿಯಾಗಿಸಿ ತೀವ್ರ ದಾಳಿ
Published 3 ಡಿಸೆಂಬರ್ 2023, 16:08 IST
Last Updated 3 ಡಿಸೆಂಬರ್ 2023, 16:08 IST
ಅಕ್ಷರ ಗಾತ್ರ

ಖಾನ್‌ ಯೂನಿಸ್‌: ಗಾಜಾದ ಎರಡನೇ ಅತಿ ದೊಡ್ಡ ನಗರವಾದ ಖಾನ್‌ ಯೂನಿಸ್‌ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್‌ನ ಸೇನಾಪಡೆ ಭಾನುವಾರ ಆದೇಶಿಸಿದೆ.

ದಕ್ಷಿಣ ಗಾಜಾದ ಖಾನ್‌ ಯೂನಿಸ್‌ ನಗರದಲ್ಲಿ ಹಲವು ಮಂದಿ ಹಮಾಸ್‌ ಮುಖಂಡರು ಅಡಗಿಕೊಂಡಿದ್ದು, ಅವರನ್ನು ಸದೆಬಡಿಯಲು ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಇಸ್ರೇಲ್‌ ಸೇನೆಯ ಮೂಲಗಳು ತಿಳಿಸಿವೆ.

ದಕ್ಷಿಣ ರಫಾದ ಕಡೆಗೆ ಅಥವಾ ನೈಋತ್ಯ ಕರಾವಳಿ ಪ್ರದೇಶದ ಕಡೆಗೆ ತೆರಳುವಂತೆ ಸೂಚಿಸಿ, ಇಸ್ರೇಲ್‌ ಪಡೆಗಳು ಕರಪತ್ರಗಳನ್ನು ಹಂಚಿವೆ.

ಖಾನ್‌ ಯೂನಿಸ್‌ ಮತ್ತು ರಫಾ ನಗರದ ಮೇಲೆ ಇಸ್ರೇಲ್‌ ಪಡೆಗಳು ಭಾರಿ ಬಾಂಬ್‌ ದಾಳಿ ನಡೆಸಿವೆ. ಖಾನ್‌ ಯೂನಿಸ್‌ ನಗರದ ವಸತಿ ಸಮುಚ್ಚಯದ ಮೇಲೆ ನಡೆದ ವಾಯುದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಾವು ಗುರಿ ತಲುಪುವ ತನಕ ಯುದ್ಧ ಮುಂದುವರಿಸುತ್ತೇವೆ. ನೆಲದ ಮೇಲಿನ ಕಾರ್ಯಾಚರಣೆ ನಡೆಸದೆ ಗುರಿ ಮುಟ್ಟಲು ಸಾಧ್ಯವಿಲ್ಲ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಶನಿವಾರ ಹೇಳಿದ್ದರು.

‘ಗಾಜಾ ಪಟ್ಟಿಯಲ್ಲಿ ಹಮಾಸ್‌ ಬಂಡುಕೋರರು ನಿರ್ಮಿಸಿರುವ ಸುರಂಗಗಳನ್ನು ಮತ್ತು ನೆಲೆಗಳನ್ನು ಗುರಿಯಾಗಿಸಿ ಯುದ್ಧವಿಮಾನ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸಿದ್ದೇವೆ, ಡ್ರೋನ್‌ ದಾಳಿಯಲ್ಲಿ ಹಮಾಸ್‌ನ ಐವರು ಬಂಡುಕೋರರು ಹತರಾಗಿದ್ದಾರೆ’ ಎಂದು ಇಸ್ರೇಲ್‌ನ ಸೇನಾಪಡೆಯ ಮೂಲಗಳು ವಿವರಿಸಿವೆ.

ಗಾಜಾ ನಗರದ ಬಳಿಯ ಶಿಜಯ್ಯಾದಲ್ಲಿ ವಸತಿ ಸಮುಚ್ಚಯದ ಮೇಲೆ ಇಸ್ರೇಲ್‌ ಶನಿವಾರ ನಡೆಸಿದ ಬಾಂಬ್‌ ದಾಳಿಯಲ್ಲಿ 60 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಮಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ. ‌

ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರ ‌ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದಿವೆ.

ಜನರನ್ನು ಸಾಮೂಹಿಕವಾಗಿ ಸ್ಥಳಾಂತರಿಸಬೇಡಿ ಎಂದು ಮಿತ್ರ ದೇಶವಾದ ಇಸ್ರೇಲ್‌ಗೆ ಅಮೆರಿಕ ಈ ಹಿಂದೆ ಹೇಳಿತ್ತು. ಯುದ್ಧ ಆರಂಭವಾದ ಬಳಿಕ 23 ಲಕ್ಷ ಜನರು ದಕ್ಷಿಣ ಗಾಜಾದಲ್ಲಿ ಆಶ್ರಯ ಪಡೆದಿದ್ದಾರೆ.

ನಾಗರಿಕರ ಸಾವು: ಕಳವಳ

ಯುದ್ಧದಲ್ಲಿ ನಾಗರಿಕರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ಉಂಟುಮಾಡಿದೆ.

ಇದುವರೆಗೆ 15,200 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಹೇಳಿದೆ.

‘ಯುದ್ಧದಲ್ಲಿ ಹಲವು ಮಂದಿ ಅಮಾಯಕ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ’ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ದುಬೈನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಹೇಳಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರತಿ‌ನಿಧಿಗಳು ಖಾನ್‌ ಯೂನಿಸ್‌ ನಗರದಲ್ಲಿರುವ ನಾಸರ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಜನರು ಅಲ್ಲಿ ದಾಖಲಾಗಿದ್ದಾರೆ’ ಎಂದು‌ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಅಧನಾಂ ಗ್ಯಾಬ್ರಿಯೇಸಸ್‌ ಎಕ್ಸ್‌ ವೇದಿಕೆಯಲ್ಲಿ ಹೇಳಿದ್ದಾರೆ.

ಖಾನ್‌ ಯೂನಿಸ್‌ ನಗರದಿಂದ ಜನರು ಭಾನುವಾರ ಸುರಕ್ಷಿತ ಸ್ಥಳಗಳಿಗೆ ತೆರಳಿದರು –ಎಎಫ್‌ಪಿ ಚಿತ್ರ
ಖಾನ್‌ ಯೂನಿಸ್‌ ನಗರದಿಂದ ಜನರು ಭಾನುವಾರ ಸುರಕ್ಷಿತ ಸ್ಥಳಗಳಿಗೆ ತೆರಳಿದರು –ಎಎಫ್‌ಪಿ ಚಿತ್ರ

ಒತ್ತೆಸೆರೆಯಲ್ಲಿದ್ದ ಹಲವರ ಸಾವು

ವೈದ್ಯಕೀಯ ಸಮಿತಿ ಜೆರುಸಲೇಂ(ರಾಯಿಟರ್ಸ್‌): ಹಮಾಸ್‌ ದಾಳಿಯ ಬಳಿಕ ನಾಪತ್ತೆಯಾಗಿದ್ದ ಹಲವರು ಬಂಡುಕೋರರ ಒತ್ತೆಸೆರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ನ ತ್ರಿಸದಸ್ಯ ವೈದ್ಯಕೀಯ ಸಮಿತಿ ಭಾನುವಾರ ಹೇಳಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್‌ ಜೊತೆ ಪರೋಕ್ಷವಾಗಿ ಮಾತುಕತೆಗೆ ಇಸ್ರೇಲ್‌ ಯತ್ನಿಸುತ್ತಿರುವುದರ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ಅಕ್ಟೋಬರ್‌ 7ರಂದು ಹಮಾಸ್‌ ನೇತೃತ್ವದಲ್ಲಿ ನಾಗರಿಕರ ಮೇಲೆ ನಡೆದ ದಾಳಿಯ ವಿಡಿಯೊಗಳನ್ನು ಉಲ್ಲೇಖಿಸಿರುವ ಸಮಿತಿಯು ಬಂಡುಕೋರರು ಅಪಹರಣ ಮಾಡುವ ವೇಳೆ ‌ಹಲವರು ತೀವ್ರವಾಗಿ ಗಾಯಗೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ ಎಂದಿದ್ದಾರೆ. 240 ಮಂದಿಯನ್ನು ಬಂಡುಕೋರರು ಅಪಹರಿಸಿದ್ದರು ಇವರಲ್ಲಿ 108 ಮಂದಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT