ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾಗೆ ವೈದ್ಯಕೀಯ, ಮಾನವೀಯ ನೆರವು: ‘ಸೀಮಿತ ವಿರಾಮ’ ಘೋಷಿಸಿದ ಇಸ್ರೇಲ್‌

Published 17 ಜೂನ್ 2024, 15:16 IST
Last Updated 17 ಜೂನ್ 2024, 15:16 IST
ಅಕ್ಷರ ಗಾತ್ರ

ಜೆರುಸಲೇಂ: ‘ವೈದ್ಯಕೀಯ, ಮಾನವೀಯ ನೆರವು ಒದಗಿಸಲು ಅವಕಾಶ ಕಲ್ಪಿಸುವ ಕ್ರಮವಾಗಿ ಗಾಜಾದ ದಕ್ಷಿಣ ವಲಯದಲ್ಲಿ ಹಗಲು ಹೊತ್ತಿನಲ್ಲಿ ಸಂಘರ್ಷಕ್ಕೆ ವಿರಾಮ ನೀಡಲಾಗುವುದು’ ಎಂದು ಇಸ್ರೇಲ್‌ ಸೇನೆಯು ಭಾನುವಾರ ಪ್ರಕಟಿಸಿದೆ.

ಇಸ್ರೆಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಣ ಯುದ್ಧ ಒಂಬತ್ತು ತಿಂಗಳ ನಂತರವೂ ಮುಂದುವರಿದಿದೆ. ಯುದ್ಧದ ಪರಿಣಾಮ ಅಸಂಖ್ಯ ಪ್ಯಾಲೆಸ್ಟೀನಿಯರು ಸಂಕಷ್ಟದಲ್ಲಿದ್ದಾರೆ.

ಉಲ್ಲೇಖಿತ ‘ಕಾರ್ಯತಂತ್ರ ವಿರಾಮ’ವು ರಫಾ ವಲಯದಲ್ಲಿ ಸುಮಾರು 12 ಕಿ.ಮೀ. ರಸ್ತೆ ವ್ಯಾಪ್ತಿಗೆ ಅನ್ವಯವಾಗಲಿದೆ. ಈ ವಿರಾಮವು ಇಸ್ರೇಲ್ ಸೇನೆಯ ಅತಿಕ್ರಮಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಾಧಿತರಾಗಿರುವ ಪ್ಯಾಲೆಸ್ಟೀನಿಯರಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಆಶಿಸಲಾಗಿದೆ.

ಕಾರ್ಯತಂತ್ರ ವಿರಾಮವು ಸ್ಥಳೀಯ ಸಮಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ, ಸಂಜೆ 7 ಗಂಟೆಯವರೆಗೆ ಮುಂದಿನ ಆದೇಶದವರೆಗೆ  ಚಾಲ್ತಿಯಲ್ಲಿರುತ್ತದೆ. ಇಸ್ರೇಲ್‌ ಸೇನೆಯ ನಿಯಂತ್ರಣದಲ್ಲಿ ಇರುವ ಕೆರೆಂ ಶಾಲೊಂ ಕ್ರಾಸಿಂಗ್ ಪ್ರದೇಶದವರೆಗೂ ಟ್ರಕ್‌ಗಳು ತೆರಳಬಹುದಾಗಿದೆ ಎಂದು ಸೇನೆಯು ತಿಳಿಸಿದೆ.

ಗಾಜಾದಲ್ಲಿ ವಿತರಣಾ ವ್ಯವಸ್ಥೆ‌ಯನ್ನು ಗಮನಿಸುತ್ತಿರುವ ಇಸ್ರೇಲ್‌ ಸೇನೆಯ ಸಿಒಜಿಎಟಿ ಸಂಸ್ಥೆಯು, ಈ ಮೂಲಕ ಕರಾವಳಿ ಪ್ರದೇಶಗಳಾದ ಖಾನ್‌ ಯೂನಿಸ್‌, ಕೇಂದ್ರ ಗಾಜಾಕ್ಕೂ ನೆರವು ಪೂರೈಸಬಹುದಾಗಿದೆ ಎಂದು ತಿಳಿಸಿದೆ.

ಮುಸಲ್ಮಾನರ ಪ್ರಮುಖ ಹಬ್ಬ ಈದ್‌–ಅಲ್–ಅದಾ ಆಚರಣೆಯ ಪೂರ್ವದಲ್ಲಿ ವಿಶ್ವಸಂಸ್ಥೆ ಹಾಗೂ ಇತರೆ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳ ಜೊತೆಗೆ ನಡೆದ ಮಾತುಕತೆಯ ಪರಿಣಾಮ ಇಸ್ರೇಲ್‌ ಸೇನೆಯು ಈ ಕಾರ್ಯತಂತ್ರ ವಿರಾಮವನ್ನು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT