ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

Published 8 ಮಾರ್ಚ್ 2024, 10:00 IST
Last Updated 8 ಮಾರ್ಚ್ 2024, 10:01 IST
ಅಕ್ಷರ ಗಾತ್ರ

ಟೊಕಿಯೊ: ‘ಜಗತ್ತಿನ ದಕ್ಷಿಣ ಭಾಗದ 125 ರಾಷ್ಟ್ರಗಳ ಸಮಸ್ಯೆಗಳನ್ನು ಆಲಿಸಲು ಭಾರತ ಆಯೋಜಿಸಿದ್ದ ಎರಡು ಸಭೆಗೆ ಗೈರಾಗಿರುವ ಚೀನಾಗಿಂತಲೂ ಈ ರಾಷ್ಟ್ರಗಳ ನಂಬಿಕೆ ಭಾರತದ ಮೇಲೆ ಹೆಚ್ಚಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಭಾರತ ಮತ್ತು ಜಪಾನ್‌ ಸ್ನೇಹ ಸಂಬಂಧಗಳ ಪ್ರತೀಕವಾದ ನಿಕ್ಕೀ ಒಕ್ಕೂಟದಲ್ಲಿ ಮಾತನಾಡಿದ ಅವರು, ‘ಬಹಳಷ್ಟು ವಿಷಯಗಳಲ್ಲಿ ಈ ರಾಷ್ಟ್ರಗಳು ಪರಸ್ಪರ ಕಾಳಜಿ ಹೊಂದಿದ್ದಾರೆ. ಇದು ಕೋವಿಡ್‌ ನಂತರದಲ್ಲಿ ಇನ್ನೂ ಹೆಚ್ಚಾಯಿತು. ದಕ್ಷಿಣದ ಬಹಳಷ್ಟು ರಾಷ್ಟ್ರಗಳು ಕೋವಿಡ್ ಲಸಿಕೆ ತಮಗೆ ಕೊನೆಗೇ ಸಿಗಲಿದೆ ಎಂದೇ ಭಾವಿಸಿದ್ದವು. ಜಿ20 ಅಧ್ಯಕ್ಷೀಯತೆಯನ್ನು ಭಾರತ ಪಡೆದ ಸಂದರ್ಭದಲ್ಲಿ ತಮ್ಮ ಕಾಳಜಿ ಕುರಿತು ಚರ್ಚೆಯೇ ನಡೆಯುವುದಿಲ್ಲ ಎಂದೇ ಈ ರಾಷ್ಟ್ರಗಳು ನಂಬಿದ್ದವು. ಹೀಗಾಗಿ ದಕ್ಷಿಣದ ಈ 125 ರಾಷ್ಟ್ರಗಳ ಸಭೆಯನ್ನು ಜಿ20ಕ್ಕಿಂತ ಮೊದಲೇ ಭಾರತ ಆಯೋಜಿಸಿತ್ತು. ಆ ಮೂಲಕ ಈ ದೇಶಗಳ ಕಳಕಳಿಯನ್ನು ಜಿ20ರಲ್ಲಿ ಮಂಡಿಸುವ ಉದ್ದೇಶ ಭಾರತ ಹೊಂದಿತ್ತು’ ಎಂದಿದ್ದಾರೆ.

‘ಏಷ್ಯಾ ಮತ್ತು ಆಫ್ರಿಕಾದಲ್ಲಿ ‘ಗ್ಲೋಬಲ್ ಸೌತ್‌’ ಎಂಬುದು ಹೆಚ್ಚು ಜನಪ್ರಿಯವಾಗಿದೆ. ಇವರ ಕುರಿತು ಯಾರಿಗೆ ಕಾಳಜಿ ಇದೆ. ಯಾರು ಈ ರಾಷ್ಟ್ರಗಳ ಪರವಾಗಿ ಮಾತನಾಡುತ್ತಿದ್ದಾರೆ ಎಂಬುದರ ಅರಿವಿದೆ. ಭಾರತದ ಅಧ್ಯಕ್ಷತೆಯಲ್ಲೇ ಜಿ20ರಲ್ಲಿ ಆಫ್ರಿಕಾಗೂ ಸ್ಥಾನ ಸಿಗಲು ಸಾಧ್ಯವಾಯಿತು. ಹೀಗಾಗಿ ದಕ್ಷಿಣದ ರಾಷ್ಟ್ರಗಳು ಭಾರತವನ್ನು ನೆಚ್ಚಿಕೊಂಡಿವೆ’ ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.

‘ಭಾರತದ ಸ್ವಾತಂತ್ರ್ಯ ನಂತರ, ಸಾಕಷ್ಟು ಆಕ್ರಮಣಗಳನ್ನು ಅನುಭವಿಸಿತು. ನಮ್ಮ ಗಡಿಯನ್ನು ಗುರುತಿಸಿಕೊಳ್ಳಲು ಪ್ರಯಾಸಪಡಬೇಕಾಯಿತು. ಹೀಗಿದ್ದರೂ ನಮ್ಮ ದೇಶದ ಒಂದು ಭಾಗವನ್ನು ಮತ್ತೊಂದು ದೇಶ ಈಗಲೂ ಆಕ್ರಮಿಸಿಕೊಂಡಿದೆ. ಆದರೆ ಜಗತ್ತಿನ ಯಾವುದೇ ದೇಶ ಅದರ ಬಗ್ಗೆ ಏನನ್ನೂ ಹೇಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮೊಂದಿಗೆ ಅನ್ಯಾಯವಾಗಿದೆ. ಆದರೆ ಆ ಅನ್ಯಾಯ ಇತರರಿಗೂ ಆಗಬೇಕೆಂದು ನಾವು ಬಯಸುವುದಿಲ್ಲ. ಪ್ರಧಾನಮಂತ್ರಿ ಅವರು ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ಮಾತುಕತೆ ನಡೆಸಿ, ಯುದ್ಧ ಕೊನೆಗಾಣಿಸಲು ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದಿಂದಾಗಿ ಇಂಧನ ಬೆಲೆ ಗಗನಕ್ಕೇರಿದೆ. ಆಹಾರ ಸಮಸ್ಯೆ ಎದುರಾಗಿದೆ. ಗೊಬ್ಬರಗಳ ಬೆಲೆಯೂ ದುಬಾರಿಯಾಗಿವೆ. ಶ್ರೀಲಂಕಾ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಐಎಂಎಫ್‌ ನೀಡಿದ್ದಕ್ಕಿಂತ ಶೇ 50ರಷ್ಟು ಹೆಚ್ಚಿನ ಮೊತ್ತವನ್ನು ಭಾರತ ನೀಡಿದೆ’ ಎಂದು ಜೈಶಂಕರ್ ಹೇಳಿದ್ದಾರೆ.

‘ದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತಕ್ಕೆ ಜವಾಬ್ದಾರಿಯೂ ದೊಡ್ಡದಿದೆ. ನಮ್ಮದು ದೊಡ್ಡ ಆರ್ಥಿಕ ರಾಷ್ಟ್ರವೇ ಆದರೂ, ಇಲ್ಲಿನ ತಲಾದಾಯ 3 ಸಾವಿರ ಅಮೆರಿಕನ್ ಡಾಲರ್‌ಗಿಂತ ಕಡಿಮೆ ಇದೆ. ಜಗತ್ತಿಗೆ ನಾವೇನಾದರೂ ಕೊಡುತ್ತಿದ್ದೇವೆ ಎಂಬುದಾದರೆ, ಅದರ ಹಿಂದೆ ಭಾರತೀಯರ ದೊಡ್ಡ ಆತ್ಮಸಮರ್ಪಣೆ ಮತ್ತು ಶ್ರಮ ಅಡಗಿರುತ್ತದೆ. ಅಂತರರಾಷ್ಟ್ರೀಯ ಬಾಂಧವ್ಯದ ವಿಷಯದಲ್ಲಿ ಭಾರತೀಯರ ನಂಬಿಕೆ ದೊಡ್ಡದು. ಕೋವಿಡ್ ಲಸಿಕೆ ಭಾರತದ ಪ್ರತಿಯೊಬ್ಬರಿಗೆ ನೀಡುವುದು ಪೂರ್ಣಗೊಳ್ಳುವ ಮೊದಲೇ, ಇತರ ರಾಷ್ಟ್ರಗಳಿಗೆ ಭಾರತ ಹಂಚಿತ್ತು. ಇದು ಜಾಗತಿಕ ದಕ್ಷಿಣಕ್ಕೆ ಭಾರತದ ಕಾಳಜಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT