ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಲ್ಲಿ ಅರಬ್‌ ಮಹಿಳೆಗೆ ಯಹೂದಿ ವ್ಯಕ್ತಿಯ ಮೂತ್ರಪಿಂಡ

Last Updated 24 ಮೇ 2021, 10:17 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌ನಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ನಾಗರಿಕರು ಮಾನವೀಯತೆಯನ್ನು ಎತ್ತಿ ಹಿಡಿದಿರುವ ಪ್ರಸಂಗಗಳು ನಡೆದಿವೆ.

ಇಸ್ರೇಲ್‌ ಮತ್ತು ಹಮಸ್‌, ಅರಬರು ಮತ್ತು ಯಹೂದಿಗಳು ಸಂಘರ್ಷ ನಡುವೆ ನಾಗರಿಕರು ಶಾಂತಿಯುತ ಸಹಬಾಳ್ವೆಗೂ ಮಾದರಿಯಾಗಿದ್ದಾರೆ.

‘ಕಳೆದ ವಾರ ಜೆರುಸಲೇಂನ ಅರಬ್‌ ಮಹಿಳೆಯೊಬ್ಬರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಮಹಿಳೆಗೆ ಲಾಡ್‌ನಲ್ಲಿ ನಡೆದ ಗಲಭೆಯಲ್ಲಿ ಮೃತ ಪಟ್ಟ ಯಹೂದಿ ಸಮುದಾಯಕ್ಕೆ ಸೇರಿದ ಯಿಗಲ್ ಯೆಹೋಶುವಾ ಅವರ ಮೂತ್ರಪಿಂಡವನ್ನು ನೀಡಲಾಗಿದೆ’ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಐದು ಮಕ್ಕಳ ತಾಯಿ ರಾಂಡಾ ಅವೀಸ್ ಅವರಿಗೆ ಯಿಗಲ್ ಯೆಹೋಶುವಾ ಅವರ ಮೂತ್ರಪಿಂಡ ನೀಡಲಾಗಿದೆ. ಜೆರುಸಲೇಂನ ಹದಸ್ಸಾಹ್‌ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು

ರಾಂಡಾ ಅವರು ಕಳೆದ ಹತ್ತು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಅಂಗಾಂಗಳನ್ನು ಪಡೆಯಲು ಕಳೆದ ಏಳು ವರ್ಷಗಳಿಂದ ಕಾಯುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

‘ಯೆಹೋಶುವಾ, ದಾನ–ಧರ್ಮದಲ್ಲಿ ನಂಬಿಕೆಯನ್ನು ಹೊಂದಿದ್ದರು. ಅವರ ಮನಸ್ಸು ಬಹಳ ವಿಶಾಲವಾಗಿತ್ತು. ಹಾಗಾಗಿ ಅವರ ಅಂಗಾಂಗ ದಾನ ಮಾಡಲು ನಾವು ಒಪ್ಪಿಕೊಂಡೆವು. ಇದು ನಮ್ಮ ಕುಟುಂಬಕ್ಕೂ ಹೆಮ್ಮೆಯ ವಿಷಯ’ ಎಂದು ಯೆಹೋಶುವಾ ಅವರ ಅಣ್ಣ ತಿಳಿಸಿದರು.

ಮೇ 17ರಂದು ಲಾಡ್‌ನಲ್ಲಿ ಗಲಭೆ ನಡೆದಿತ್ತು. ಈ ವೇಳೆ ಯೆಹೋಶುವಾ ಅವರ ಕಾರಿಗೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಯೆಹೋಶುವಾ ಅವರು ಮೃತಪಟ್ಟಿದ್ದರು.

ಇನ್ನೊಂದೆಡೆ, ಕಳೆದ ವಾರ ಗಲಭೆಯಲ್ಲಿ ಹತ್ಯೆಯಾಗಿದ್ದ ಉಮ್ ಅಲ್ ಫಾಹ್ಮ್‌ನ ನಿವಾಸಿ 17 ವರ್ಷದ ಮೊಹಮ್ಮದ್‌ ಕಿವಾನ್‌ ಅವರ ಅಂಗಾಂಗಗಳನ್ನು ಐದು ಯಹೂದಿಗಳು ಸೇರಿದಂತೆ ಆರು ಮಂದಿಗೆ ದಾನ ಮಾಡಲಾಗಿದೆ.

‘ನನ್ನ ಮಗನಿಂದಾಗಿ ಆರು ಜನರು ಜೀವ ಉಳಿಯಿತೆಂದು ನನಗೆ ಖುಷಿಯಿದೆ. ನಾವು ಸಹಬಾಳ್ವೆಯಲ್ಲಿ ವಿಶ್ವಾಸವನ್ನು ಹೊಂದಿದ್ಧೇವೆ. ಧರ್ಮ, ಜನಾಂಗ ಮತ್ತು ಲಿಂಗವನ್ನು ಲೆಕ್ಕಿಸದೆ ಜೀವಗಳನ್ನು ಉಳಿಸಲು ನಾವು ಬಯಸಿದೆವು’ ಎಂದು ಕಿವಾನ್‌ ತಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT