ವೇದ ಪಠಣದೊಂದಿಗೆ ದಿನದ ಕಲಾಪ ಆರಂಭ
ಶಿಕಾಗೊ (ಪಿಟಿಐ): ‘ಅಮೆರಿಕಕ್ಕೆ ಒಳಿತಾಗಲಿ’ ಎಂದು ಪ್ರಾರ್ಥಿಸಿ ವೇದಗಳ ಪಠಣ ಮಾಡುವ ಮೂಲಕ ಇಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ಸಮಾವೇಶದ ಮೂರನೇ ದಿನದ ಕಲಾಪಕ್ಕೆ ಚಾಲನೆ ನೀಡಲಾಯಿತು. ‘ನಮ್ಮಲ್ಲಿ ಭಿನ್ನಮತವಿರಬಹುದು. ಆದರೆ ದೇಶದ ವಿಷಯ ಬಂದಾಗ ಎಲ್ಲರೂ ಒಗ್ಗೂಡಬೇಕು. ಆಗ ಎಲ್ಲರೂ ನ್ಯಾಯಸ್ಥಾನದತ್ತ ಸಾಗಲು ಸಾಧ್ಯ’ ಎಂದು ಅರ್ಚಕ ರಾಕೇಶ್ ಭಟ್ ಹೇಳಿದರು. ‘ಉತ್ತಮ ಸಮಾಜಕ್ಕಾಗಿ ನಾವು ಒಂದಾಗಿರೋಣ. ನಮ್ಮ ಮನಸ್ಸುಗಳು ಒಟ್ಟಾಗಿ ಚಿಂತಿಸಲಿ. ಹೃದಯಗಳ ಬಡಿತ ಒಂದೇ ಆಗಿರಲಿ. ಇದು ನಮ್ಮನ್ನು ಶಕ್ತಿವಂತರಾಗಿಸಲಿ’ ಎಂದು ಅಭಿಪ್ರಾಯಪಟ್ಟರು. ಮೇರಿಲ್ಯಾಂಡ್‌ನ ಶಿವವಿಷ್ಣು ದೇಗುಲದ ಅರ್ಚಕ ರಾಕೇಶ್ ಭಟ್ ಮೂಲತಃ ಬೆಂಗಳೂರಿನವರು. ಉಡುಪಿ ಅಷ್ಟಮಠದ ಪೇಜಾವರ ಶ್ರೀಗಳು ಇವರ ಗುರು. ಉಡುಪಿ ಅಷ್ಟಮಠದಲ್ಲಿ ಕೆಲ ವರ್ಷ ಅರ್ಚಕರಾಗಿ ಕೆಲಸ ಮಾಡಿರುವ ಅವರು 2013ರಿಂದ ಮೇರಿಲ್ಯಾಂಡ್‌ನ ವಿಷ್ಣು ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಬೆಂಗಳೂರಿನ ಆಸ್ಟೀನ್ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಹಾಗೂ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಸಂಸ್ಕೃತ ವಿಷಯದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮುಖಂಡ ಅಜಯ್ ಭುಟೋರಿಯಾ ‘ಇಂದಿನ ಹಿಂದೂ ಪ್ರಾರ್ಥನೆ ಸ್ಮರಣೀಯ ಕ್ಷಣವಾಗಿದ್ದು ವೈವಿಧ್ಯ ಕುರಿತು ಪಕ್ಷದ ಬದ್ಧತೆಗೆ ನಿದರ್ಶನವಾಗಿದೆ’ ಎಂದು ವ್ಯಾಖ್ಯಾನಿಸಿದರು