ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ರಾಹುಲ್ ಭಾಷಣಕ್ಕೆ ಅಡ್ಡಿ ಮಾಡಿದ ಖಾಲಿಸ್ತಾನ ಪರ ಹೋರಾಟಗಾರರು

Published 31 ಮೇ 2023, 11:03 IST
Last Updated 31 ಮೇ 2023, 11:03 IST
ಅಕ್ಷರ ಗಾತ್ರ

ಸಾಂತಾ ಕ್ಲಾರಾ(ಅಮೆರಿಕ): ಕ್ಯಾಲಿಫೋರ್ನಿಯಾದಲ್ಲಿ ರಾಹುಲ್ ಗಾಂಧಿ ಮಾಡುತ್ತಿದ್ದ ಭಾಷಣಕ್ಕೆ ಖಾಲಿಸ್ತಾನ ಪರ ಹೋರಾಟಗಾರರ ಗುಂಪು ಅಡ್ಡಿಪಡಿಸಿದ ಘಟನೆ ನಡೆದಿದೆ.

ಸಾಂತಾ ಕ್ಲಾರಾದಲ್ಲಿ ಅಮೆರಿಕ ಸಾಗರೋತ್ತರ ಕಾಂಗ್ರೆಸ್ ಘಟಕವು ಆಯೋಜಿಸಿದ್ದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ರಾಹುಲ್ ಮಾತನಾಡುತ್ತಿದ್ದರು. ಈ ವೇಳೆ ಖಾಲಿಸ್ತಾನ ಪರ ಹೋರಾಟಗಾರರ ಗುಂಪು 1984ರ ಸಿಖ್ ವಿರೋಧಿ ದಂಗೆ ಉಲ್ಲೇಖಿಸಿ ರಾಹುಲ್ ಮತ್ತು ಗಾಂಧಿ ಕುಟುಂಬದ ವಿರುದ್ಧ ಘೋಷಣೆಗಳನ್ನು ಕೂಗಿತು. ಈ ನಡುವೆ ಕೆಲಕಾಲ ಭಾಷಣಕ್ಕೆ ಅಡ್ಡಿ ಉಂಟಾಯಿತು.

ಇದರಿಂದ ವಿಚಲಿತರಾಗದ ರಾಹುಲ್ ಗಾಂಧಿ, ನಗುತ್ತಲೇ.. ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಗೆ ಸ್ವಾಗತ.. ಸುಸ್ವಾಗತ’ ಎಂದು ಹೇಳಿದ್ದಾರೆ.

ಬಳಿಕ, ಬೆಂಬಲಿಗರನ್ನು ಸೇರಿಕೊಂಡ 52 ವರ್ಷದ ಕಾಂಗ್ರೆಸ್ ನಾಯಕ, ಭಾರತ್ ಜೋಡೊ ಘೋಷಣೆಯನ್ನು ಕೂಗಿದ್ದಾರೆ.

‘ನಮ್ಮ, ಕಾಂಗ್ರೆಸ್ ಪಕ್ಷದ ಬಗೆಗಿನ ಆಸಕ್ತಿಕರ ಅಂಶವೆಂದರೆ, ನಾವು ಎಲ್ಲರ ಬಗ್ಗೆ ಪ್ರೀತಿ, ವಾತ್ಸಲ್ಯ ಹೊಂದಿದ್ದೇವೆ. ಯಾರಾದರೂ ಬಂದು ಒಂದು ವಿಷಯದ ಬಗ್ಗೆ ಹೇಳಿದಾಗ ಅದನ್ನು ಕೇಳಿಸಿಕೊಳ್ಳಲು ಸಿದ್ಧರಿದ್ದೇವೆ. ಅಂತಹ ಸಂದರ್ಭದಲ್ಲಿ ನಾವು ಕೋಪಗೊಳ್ಳುವುದೂ ಇಲ್ಲ. ಆಕ್ರಮಣಕಾರಿಯಾಗಿ ವರ್ತಿಸುವುದೂ ಇಲ್ಲ. ಅವರ ಬಗ್ಗೆ ಪ್ರೀತಿ, ವಾತ್ಸಲ್ಯ ತೋರುತ್ತೇವೆ. ಏಕೆಂದರೆ, ಅದು ನಮ್ಮ ಗುಣ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಘಟನೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, 1984ರ ಸಿಖ್ ನರಮೇಧಕ್ಕೆ ಸಂಬಂಧಿಸಿ ರಾಹುಲ್ ಗಾಂಧಿಗೆ ತಡೆ ಹಾಕಲಾಗಿದೆ. ನೀವು ಹಚ್ಚಿದ ಬೆಂಕಿ ಈಗಲೂ ದೊಡ್ಡದಾಗಿ ಹೊತ್ತಿ ಉರಿಯುತ್ತಿದೆ ಎಂದು ಕುಟುಕಿದ್ದಾರೆ.

ಮಾಳವೀಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥ್, ರಾಹುಲ್ ಗಾಂಧಿಯನ್ನು ವಿರೋಧಿಸಲು ಖಾಲಿಸ್ತಾನ ಪರ ಹೋರಾಟಗಾರರನ್ನು ಏಕೆ ಬೆಂಬಲಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

‘ಅಲ್ಲಿನ ಘಟನೆಯ ಬಗ್ಗೆ ನೀವು ಮತ್ತಷ್ಟು ಕೇಳಿಸಿಕೊಂಡಿದ್ದರೆ ಖಾಲಿಸ್ತಾನ ಹೋರಾಟಗಾರರಿಗೆ ಪ್ರತಿಕ್ರಿಯಿಸಲು ಅಲ್ಲಿನ ಜನರು ಭಾರತ್ ಜೋಡೊ ಘೋಷಣೆ ಕೂಗಿದ್ದು ನಿಮ್ಮ ಗಮನಕ್ಕೆ ಬಂದಿರುತ್ತಿತ್ತು. ನೀವೂ ಸಹ ತ್ರಿವರ್ಣ ಧ್ವಜ ಹಿಡಿದು ಭಾರತ್ ಜೋಡೊ ಎಂದು ಹೇಳಿ. ಆ ಬಳಿಕ ನಿಮ್ಮಂಥ ದೇಶದ್ರೋಹಿಗೂ ಒಳ್ಳೆಯ ಅನುಭವವಾಗುತ್ತದೆ’ ಎಂದು ಅವರು ಗುಡುಗಿದ್ದಾರೆ.

ಅಮೆರಿಕದ ಮೂರು ನಗರಗಳ ಪ್ರವಾಸಕ್ಕಾಗಿ ಮಂಗಳವಾರ ರಾಹುಲ್ ಗಾಂಧಿ ಅಮೆರಿಕಕ್ಕೆ ತೆರಳಿದ್ದು, ಅಲ್ಲಿ ಭಾರತೀಯ ಸಮುದಾಯ ಮತ್ತು ಸಂಸದರನ್ನು ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT