ಕರಾಚಿ: ಪಾಕಿಸ್ತಾನದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಸ್ ಅಪಘಾತಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ.
11 ಯಾತ್ರಾರ್ಥಿಗಳ ಸಾವು
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 11 ಮಂದಿ ಮೃತಪಟ್ಟು, 35 ಮಂದಿ ಗಾಯಗೊಂಡಿರುವ ಘಟನೆ ಬಲೂಚಿಸ್ತಾನದಲ್ಲಿ ನಡೆದಿದೆ.
70 ಮಂದಿ ಇದ್ದ ಬಸ್, ಇರಾನ್‌ನಿಂದ ಯಾತ್ರಾರ್ಥಿಗಳನ್ನು ಪಂಜಾಬ್ ಪ್ರಾಂತ್ಯಕ್ಕೆ ಕರೆತರುತ್ತಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಸಿಂಧ್ ಪ್ರಾಂತ್ಯದ ಕರಾಚಿಯಿಂದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್‌ವರೆಗೆ ಪಾಕಿಸ್ತಾನದ ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ವಿಸ್ತರಿಸಿರುವ 653 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಾದ ಮಕ್ರಾನ್ ಕರಾವಳಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಬಹುತೇಕ ಪ್ರಯಾಣಿಕರು ಲಾಹೋರ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ತಂಡ ತಿಳಿಸಿದೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮಾರ್ಯಮ್ ನವಾಜ್ ಷರೀಫ್ ಘಟನೆ ಬಗ್ಗೆ ತೀವ್ರ ದೂಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ಧಾರೆ.
ಪಾಕಿಸ್ತಾನದ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಇರಾನ್‌ನಲ್ಲಿ ಅಪಘಾತಕ್ಕೀಡಾಗಿ 15 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡ ಘಟನೆ ನಡೆದ ಕೆಲವೇ ದಿನಗಗಳಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ.
26 ಮಂದಿ ಸಾವು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 35 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಬಿದ್ದು 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಖಾಸಗಿ ಆಂಬ್ಯುಲೆನ್ಸ್ ಸೇವೆಯನ್ನು ನಡೆಸುತ್ತಿರುವ ಈಧಿ ಫೌಂಡೇಶನ್‌ನ ಕಮರ್ ನದೀಮ್ ಹೇಳಿದ್ದಾರೆ.
"ಇಲ್ಲಿಯವರೆಗೆ, 26 ಜನರು ಸಾವಿಗೀಡಾಗಿರುವುದು ದೃಢಪಟ್ಟಿದೆ ಮತ್ತು ಮೂವರು ಗಾಯಗೊಂಡಿದ್ದಾರೆ’ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸ್ಥಳೀಯರು ಬಸ್‌ನಿಂದ ಮೃತದೇಹಗಳನ್ನು ಹೊರತರುತ್ತಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಿವೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ ಎಂದು ಸಾಧನೋತಿ ಡಿಸಿ ಉಮರ್ ಫಾರೂಕ್ ಹೇಳಿದ್ದಾರೆ. ಮೃತರೆಲ್ಲರೂ ಸಾಧನೋತಿ ಜಿಲ್ಲೆಯವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.