ನ್ಯೂಯಾರ್ಕ್: ಸುಮಾರು ಮೂರು ಬಸ್‌ಗಳಷ್ಟು ವಲಸಿಗರನ್ನು ಟೆಕ್ಸಾಸ್ ನಗರದ ಅಧಿಕಾರಿಗಳು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನಿವಾಸದ ಬಳಿ ಹೆಪ್ಪುಗಟ್ಟುವ ಚಳಿಯಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಇತ್ತೀಚೆಗೆ ನಡೆದಿದೆ.
ಕ್ರಿಸ್‌ಮಸ್ ವಾರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಸುಮಾರು 110–130 ಮಂದಿ ವಲಸಿಗರನ್ನು ಅನಾಥವಾಗಿ ಬಿಟ್ಟು ಹೋಗಲಾಗಿತ್ತು. ಇದರಲ್ಲಿ ಚಿಕ್ಕ ಮಕ್ಕಳೂ ಇದ್ದರು ಎನ್ನಲಾಗಿದೆ.
‘ಬಾಂಬ್ ಸೈಕ್ಲೋನ್’ ಎಂಬ ಪ್ರಾಕೃತಿಕ ವಿಪತ್ತಿಗೆ ಸಿಲುಕಿರುವ ಅಮೆರಿಕದಲ್ಲಿ ತಾಪಮಾನವು ಮೈನಸ್ 40 ಡಿಗ್ರಿಗೆ ಕುಸಿದಿದೆ. ಈ ಅಪಾಯಕಾರಿ ವಿದ್ಯಮಾನಕ್ಕೆ ದೇಶದಲ್ಲಿ ಈಗಾಗಲೇ 28 ಮಂದಿ ಮೃತಪಟ್ಟಿದ್ದಾರೆ. ಬಿಸಿ ನೀರು ಕೂಡ ಕ್ಷಣಾರ್ಧದಲ್ಲಿ ಕಲ್ಲಿನಂತಾಗುವ ಚಳಿಗೆ ಬೆದರಿರುವ ನಾಗರಿಕರು ಮನೆಗಳಿಂದ ಆಚೆ ಕಾಲಿಡಲೂ ಹೆದರುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ವಲಸಿಗರನ್ನು ಹೀಗೆ ಕ್ರೂರ ಚಳಿಯಲ್ಲಿ ಅನಾಥವಾಗಿ ಬಿಟ್ಟು ಹೋಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವಲಸಿಗರನ್ನು ಕಮಲಾ ಹ್ಯಾರಿಸ್ ಅವರ ನಿವಾಸದ ಬಳಿಗೆ ಸಾಗಿಸಲಾಯಿತೇ ಎಂಬುದರ ಕುರಿತು ಪ್ರತಿಕ್ರಿಯಿಸಲು ಟೆಕ್ಸಾಸ್‌ನ ಗವರ್ನರ್ ಗ್ರೆಗ್ ಅಬಾಟ್ ಅವರಾಗಲಿ ಅವರ ಸಹಾಯಕರಾಗಲಿ ಲಭ್ಯರಾಗಿಲ್ಲ.
ರಿಪಬ್ಲಿಕನ್ ಆಗಿರುವ ಟೆಕ್ಸಾಸ್‌ನ ಗವರ್ನರ್ ಗ್ರೆಗ್ ಅಬಾಟ್ ಅವರು ಬೈಡನ್ ಸರ್ಕಾರದ ವಲಸೆ ನೀತಿಗಳ ಕಟು ಟೀಕಾಕಾರಲ್ಲಿ ಒಬ್ಬರು. ಅಬಾಟ್ ಸೇರಿದಂತೆ ಕೆಲವು ರಿಪಬ್ಲಿಕನ್ ಗವರ್ನರ್‌ಗಳು ಇಂಥ ವಲಸಿಗರನ್ನು ಅಮೆರಿಕದ ಉತ್ತರ ಭಾಗದ ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿರುವ ನಗರಗಳಿಗೆ ಸಾಗಿಸುತ್ತಿರುವ ಆರೋಪಗಳಿವೆ.
ಕಳೆದ ವಾರ, ಒಂಬತ್ತು ಬಸ್‌ನಷ್ಟು ವಲಸಿಗರನ್ನು ವಾಷಿಂಗ್ಟನ್‌ನಲ್ಲಿ ಇಳಿಸಿ ಹೋಗಲಾಗಿತ್ತು ಎಂದು ವಲಸಿಗರಿಗೆ ಪರಿಹಾರ ಒದಗಿಸುವ ‘ಸಮು’ ಎಂಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಟಟ್ಯಾನ ಲಾಬೋರ್ಡೆ ತಿಳಿಸಿದ್ದಾರೆ.
‘ಹಿಂದೆ, ವೆನೆಜುವೆಲಾದಿಂದ ಹಲವರು ಬಸ್‌ನಲ್ಲಿ ಬರುತ್ತಿದ್ದರು. ಇತ್ತೀಚೆಗೆ, ಈಕ್ವೆಡಾರ್ ಮತ್ತು ಕೊಲಂಬಿಯಾದಿಂದ ವಲಸೆ ಬರುತ್ತಿದ್ದಾರೆ’ ಎಂದು ಲ್ಯಾಬೋರ್ಡ್ ಹೇಳಿದರು.
ಇತ್ತೀಚೆಗೆ ವಲಸೆ ಬರುತ್ತಿರುವ ಬಹುತೇಕರು ನ್ಯೂಯಾರ್ಕ್ ಅಥವಾ ನ್ಯೂಜೆರ್ಸಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಅವರು ಸಂಬಂಧಿಕರು ಅಥವಾ ಇತರ ಸಮುದಾಯದ ಬೆಂಬಲವನ್ನು ಹೊಂದಿದ್ದಾರೆ ಎನ್ನಲಾಗಿದೆ.
It's Christmas Eve and about 50 migrants were dropped off in front of Kamala Harris' residence with the temperature in the teens. Another stunt by Greg Abbott. pic.twitter.com/wUjkxplYmB
— Fifty Shades of Whey (@davenewworld_2) December 25, 2022
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.