ಕೀವ್: ರಷ್ಯಾ–ಉಕ್ರೇನ್ ಯುದ್ಧ ಆರಂಭವಾಗಿ ಸುಮಾರು ಎರಡೂವರೆ ವರ್ಷ ಕಳೆದಿದ್ದು, ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಹಿನ್ನೆಡೆಯಾಗಿದೆ. ತನ್ನ ಗಡಿಯಿಂದ ಸುಮಾರು 30 ಕೀ.ಮೀ ದೂರದಲ್ಲಿರುವ ರಷ್ಯಾದ ಕರ್ಕ್ಸ್ ನಗರದವರೆಗೆ ಉಕ್ರೇನ್ ಸೇನೆ ತಲುಪಿದೆ. ಈಗ ಈ ನಗರದ ಗಡಿಗಳನ್ನು ರಷ್ಯಾ ಸೇನೆ ಸುತ್ತುವರೆದಿದ್ದು, ಇಲ್ಲಿನ ಸುಮಾರು 76 ಸಾವಿರ ಜನರು ಊರು ತೊರೆದಿದ್ದಾರೆ.
ಉಕ್ರೇನ್ ಸೇನೆಯು ಕೆಲವು ದಿನಗಳ ಹಿಂದೆ ಈ ನಗರದ ಮೇಲೆ ಅನಿರೀಕ್ಷಿತ ದಾಳಿ ನಡೆಸಿತ್ತು. ಇದೂವರೆಗೂ ರಷ್ಯಾಗೆ ಪ್ರತಿದಾಳಿ ನಡೆಸಲು ಸಾಧ್ಯವಾಗಿಲ್ಲ. ‘ಕರ್ಕ್ಸ್ ನಗರ ತೊರೆಯಿರಿ’ ಎಂದು ರಷ್ಯಾ ಸರ್ಕಾರವು ಜನರಿಗೆ ಕರೆ ನೀಡುತ್ತಿದೆ. ಎರಡನೇ ವಿಶ್ವ ಯುದ್ಧದ ಬಳಿಕ ರಷ್ಯಾದ ನೆಲದಲ್ಲಿ ನಿಂತು, ರಷ್ಯಾದ ಮೇಲೆ ಯಾರೂ ದಾಳಿ ನಡೆಸಿರಲಿಲ್ಲ.
ತನ್ನ ಗಡಿಗಳಿಂದ ರಷ್ಯಾ ಸೈನಿಕರನ್ನು ದೂರ ಅಟ್ಟುವುದಕ್ಕಾಗಿ ಉಕ್ರೇನ್ ಸೇನೆ ರಷ್ಯಾದ ಒಳಗೆ ಬರುತ್ತಿದೆಯೊ ಅಥವಾ ರಷ್ಯಾದ ಮೇಲೆ ದಾಳಿ ನಡೆಸಲೆಂದೇ ಮುಂದಾಗುತ್ತಿದೆಯೊ ಎಂಬುದು ಗುಟ್ಟಾಗಿಯೇ ಇದೆ. ಉಕ್ರೇನ್ ತನ್ನ ಕಾರ್ಯಾಚರಣೆಗಳನ್ನು ಅತ್ಯಂತ ರಹಸ್ಯವಾಗಿ ನಡೆಸುತ್ತಿದೆ ಎನ್ನಲಾಗುತ್ತಿದೆ.
ಉಕ್ರೇನ್ ಗಡಿಯಿಂದ 10 ಕೀ.ಮೀ ದೂರದಲ್ಲಿರುವ ರಷ್ಯಾದ ಸೂಡ್ಜ ನಗರವು ಉಕ್ರೇನ್ ಸೇನೆಯ ವಶದಲ್ಲಿದೆ. ಈ ನಗರದಲ್ಲಿ ಪ್ರಮುಖವಾದ ನೈಸರ್ಗಿಕ ಅನಿಲ ಸಾರಿಗೆ ಕೇಂದ್ರ ಇದೆ.
ಪುಟಿನ್‌ಗೆ ಅವಮಾನ: ಈ ಯುದ್ಧದಿಂದ ರಷ್ಯಾದ ಪ್ರದೇಶಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧ್ಯಕ್ಷ ಪುಟಿನ್ ಹೇಳಿಕೊಂಡಿದ್ದರು. ಈಗ ಅಲ್ಲಿನ ವಿರೋಧ ಪಕ್ಷಗಳು ಪುಟಿನ್ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳುತ್ತಿವೆ. ‘ಗಡಿಗಳನ್ನು ರಕ್ಷಿಸುವಲ್ಲಿ ಸೇನೆ ಸೋತಿದೆ’ ಎನ್ನುತ್ತಿವೆ. ಆದರೆ, ಸರ್ಕಾರ ಮಾತ್ರ ನಮ್ಮ ನಗರದ ಮೇಲಾದ ದಾಳಿ ಕುರಿತು ಮಾತನಾಡದೆ, ತಾವು ಜನರನ್ನು ರಕ್ಷಿಸುತ್ತಿದ್ದೇವೆ ಎಂದಷ್ಟೇ ಪ್ರಚಾರ ಮಾಡುತ್ತಿದೆ.
ಉಕ್ರೇನ್ ಸೇನೆ ಈಗ ರಷ್ಯಾದ ಯಾವ ಪ್ರದೇಶದಲ್ಲಿ ಇದೆಯೊ ಅಲ್ಲಿಂದ ಮುಂದೆ ಸಾಗಿ ದಾಳಿಗೆ ಮುಂದಾದರೆ ರಷ್ಯಾಗೆ ಸಂಕಷ್ಟ ಎದುರಾಗಲಿದೆಪಾಸಿ ಪಾರೋನಿನ್, ಫಿನ್‌ಲೆಂಡ್‌ನ ಗುಪ್ತಚರ ಸಂಸ್ಥೆಯ ವಿಶ್ಲೇಷಕಿ
ರಷ್ಯಾದ ಗಡಿಯೊಳಗೆ ಉಕ್ರೇನ್ ಸೇನೆ ನುಗ್ಗಿರುವುದು ರಷ್ಯಾ ಸೇನೆಯ ಕಾರ್ಯಾಚರಣೆಗೆ ಹಾಗೂ ಅದರ ಕಾರ್ಯತಂತ್ರಕ್ಕೆ ಸವಾಲೊಡ್ಡಲಿದೆಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.