ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು

Published 13 ಆಗಸ್ಟ್ 2024, 9:49 IST
Last Updated 13 ಆಗಸ್ಟ್ 2024, 9:49 IST
ಅಕ್ಷರ ಗಾತ್ರ

ಢಾಕಾ: ದೇಶದಲ್ಲಿ ಕಳೆದ ತಿಂಗಳು ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕಿರಾಣಿ ಅಂಗಡಿ ಮಾಲೀಕನೊಬ್ಬ ಮೃತಪಟ್ಟಿದ್ದ. ಈ ಸಂಬಂಧ ದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ ಆರು ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.

ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಹಸೀನಾ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಕಳೆದ ವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. 76 ವರ್ಷದ ಹಸೀನಾ ವಿರುದ್ಧ ಇದೇ ಮೊಟ್ಟಮೊದಲ ಬಾರಿಗೆ ಮೊಕದ್ದಮೆ ದಾಖಲಿಸಲಾಗಿದೆ.

ಜುಲೈ 19 ರಂದು ಮೊಹಮ್ಮದ್‌ಪುರದಲ್ಲಿ ನಡೆದ ಮೆರವಣಿಗೆಯಲ್ಲಿ ಕಿರಾಣಿ ಅಂಗಡಿ ಮಾಲೀಕ ಅಬು ಸೈಯದ್ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ. ಆತನ ಹಿತೈಷಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಹಸೀನಾ ಸೇರಿದಂತೆ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್, ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇದಲ್ಲದೆ, ಇನ್ನೂ ಹಲವರು ಹೆಸರಿಸದ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈವರೆಗೆ ಸುಮಾರು 560 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ 5 ರಂದು ಹಸೀನಾ ನೇತೃತ್ವದ ಸರ್ಕಾರ ಪತನದ ಬಳಿಕ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 232 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಯೂನಸ್‌ ಅವರು ಗುರುವಾರ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಸಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT