ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ | ಮಧ್ಯಂತರ ಸರ್ಕಾರದ ಖಾತೆ ಹಂಚಿಕೆ: ಯೂನಸ್‌ ಬಳಿ ರಕ್ಷಣೆ, ಶಿಕ್ಷಣ

ಮಧ್ಯಂತರ ಸರ್ಕಾರ: ಸಲಹಾ ಮಂಡಳಿ ಸದಸ್ಯರಿಗೆ ಖಾತೆ ಹಂಚಿಕೆ
Published 9 ಆಗಸ್ಟ್ 2024, 14:09 IST
Last Updated 9 ಆಗಸ್ಟ್ 2024, 14:09 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಅವರು ಶುಕ್ರವಾರ ನೂತನವಾಗಿ ನೇಮಕವಾಗಿರುವ ಸಂಪುಟ ಸಲಹೆಗಾರರ ಖಾತೆಗಳನ್ನು ಹಂಚಿಕೆ ಮಾಡಿದರು. 

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಯೂನಸ್‌ ಅವರು ಗುರುವಾರ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಸಮ. ರಕ್ಷಣೆ, ಸಾರ್ವಜನಿಕ ಆಡಳಿತ, ಶಿಕ್ಷಣ, ಇಂಧನ, ಆಹಾರ, ಜಲ ಸಂಪನ್ಮೂಲ ಮತ್ತು ಮಾಹಿತಿ ಸಚಿವಾಲಯ ಸೇರಿ ಒಟ್ಟು 27 ಸಚಿವಾಲಯಗಳು ಯೂನಸ್‌ ಅವರ ಬಳಿಯೇ ಇರಲಿವೆ.

ವಿದ್ಯಾರ್ಥಿ ನಾಯಕರು, ಸೇನೆ ಮತ್ತು ನಾಗರಿಕ ಸಮಾಜದ ಮುಖಂಡರ ಸಲಹೆ ಪಡೆದು ಸಂಪುಟ ಸಲಹೆಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್‌ ತೌಹಿದ್ ಹೊಸೈನ್‌ ಅವರನ್ನು ವಿದೇಶಾಂಗ ಸಚಿವರಾಗಿ ಮತ್ತು ಸೇನೆಯ ನಿವೃತ್ತ ಬ್ರಿಗೇಡಿಯರ್‌ ಜನರಲ್‌ ಎಂ. ಶೇಖಾವತ್‌ ಹೊಸೈನ್‌ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಗಿದೆ. 

ಬಾಂಗ್ಲಾದೇಶ ಬ್ಯಾಂಕ್‌ನ ಮಾಜಿ ಗವರ್ನರ್‌ ಸಲಾಹುದ್ದೀನ್‌ ಅಹ್ಮದ್‌ ಅವರು ಹಣಕಾಸು ಮತ್ತು ಯೋಜನಾ ಸಚಿವರಾದರೆ, ಮಾಜಿ ಅಟಾರ್ನಿ ಜನರಲ್‌ ಎ.ಎಫ್‌. ಹಸನ್‌ ಆರಿಫ್‌ ಸ್ಥಳೀಯ ಆಡಳಿತ ಸಚಿವರಾಗಿದ್ದಾರೆ. 

‘ದೌರ್ಜನ್ಯದ ವಿರುದ್ಧ ವಿದ್ಯಾರ್ಥಿಗಳು’ ಚಳವಳಿಯ ಸಂಘಟಕರಾದ ಎಂ. ನಹೀದ್‌ ಇಸ್ಲಾಂ ಮತ್ತು ಆಸಿಫ್‌ ಮಹಮದ್‌ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಅವರು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದಾರೆ.

ಸಂಪುಟ ಸಲಹೆಗಾರರಲ್ಲಿ ಕೆಲವರು ಗುರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಸದ್ಯ, ಯೂನಸ್ ಅವರ ಬಳಿಯಿರುವ 27 ಖಾತೆಗಳಲ್ಲಿ ಕೆಲವನ್ನು ಅವರಿಗೆ ನೀಡುವ ನಿರೀಕ್ಷೆ ಇದೆ.

‘ಜನಾಂಗೀಯ ಹಿಂಸಾಚಾರ ಸಹಿಸಲ್ಲ’

ವಿಶ್ವಸಂಸ್ಥೆ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಇಂಥ ಕೃತ್ಯವನ್ನು ಖಂಡಿಸುವುದಾಗಿ ವಿಶ್ವಸಂಸ್ಥೆ ಹೇಳಿದೆ. ‘ಜನಾಂಗವನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ಮತ್ತು ಹಿಂಸೆಗೆ ಪ್ರಚೋದನೆ ನೀಡುವುದನ್ನು ವಿರೋಧಿಸುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ‘ಬಾಂಗ್ಲಾದೇಶದಲ್ಲಿ ಕೆಲದಿನಗಳಿಂದ ನಡೆಯುತ್ತಿದ್ದ ಹಿಂಸಾಚಾರವನ್ನು ತಗ್ಗಿಸಲಾಗಿದೆ. ನಿಶ್ಚಿತವಾಗಿ ನಾವು ಜನಾಂಗೀಯ ಹಿಂಸಾಚಾರದ ವಿರುದ್ಧ ಇದ್ದೇವೆ’ ಎಂದು ಗುಟೆರಸ್‌ ಅವರ ಉಪ ವಕ್ತಾರ ಫರಾನ್‌ ಹಕ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT