ಇಸ್ಲಾಮಾಬಾದ್: ಬಂಧನದಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ‘ನನಗೆ ಜೀವ ಬೆದರಿಕೆ ಇದೆ. ನನ್ನ ಜೀವಕ್ಕೆ ಅಪಾಯ ಉಂಟಾದರೆ ಅದಕ್ಕೆ ಸೇನೆ ಮತ್ತು ಗುಪ್ತಚರ ಇಲಾಖೆಯೇ (ಐಎಸ್‌ಐ) ಹೊಣೆ’ ಎಂದು ಹೇಳಿದ್ದಾರೆ.
‘ನನ್ನನ್ನು ಜೈಲಿನಲ್ಲಿ ಇರಿಸಿರುವುದಕ್ಕೆ ಸಂಬಂಧಿಸಿದ ಎಲ್ಲ ಆಡಳಿತಾತ್ಮಕ ವಿಚಾರಗಳನ್ನು ಐಎಸ್‌ಐ ನಿಯಂತ್ರಿಸುತ್ತಿದೆ. ನನಗೆ ಏನಾದರೂ ತೊಂದರೆಯಾದಲ್ಲಿ ಅದಕ್ಕೆ ಸೇನೆ ಮುಖ್ಯಸ್ಥ ಹಾಗೂ ಐಎಸ್‌ಐ ಪ್ರಧಾನ ನಿರ್ದೇಶಕರೇ ಕಾರಣ’ ಎಂದು ಇಮ್ರಾನ್‌ಖಾನ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಮಾಜಿ ಪ್ರಧಾನಿ ವಿರುದ್ಧದ, ಕಳೆದ ವರ್ಷ ಮೇ 9ರಂದು ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ಸೇನಾ ಕೋರ್ಟ್ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದ ಬೆನ್ನಲ್ಲೇ ಖಾನ್ ಈ ಹೇಳಿಕೆ ನೀಡಿದ್ದಾರೆ.
‘ಈಗಾಗಲೇ ಎರಡು ಬಾರಿ ನನ್ನ ಹತ್ಯೆ ಯತ್ನ ನಡೆದಿದೆ. ನಾನು ತಿನ್ನುವ ಆಹಾರದಲ್ಲಿ ವಿಷ ಇಲ್ಲ ಎಂಬುದನ್ನು ಖಚಿತಪಡಿಸಲು ನೇಮಕವಾಗಿದ್ದ ಸಿಬ್ಬಂದಿಯನ್ನು ನಾಲ್ಕನೇ ಬಾರಿ ಬದಲಾಯಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
‘ನಾನು ಮತ್ತು ನನ್ನ ಪತ್ನಿ ಇರುವ ಜೈಲಿನ ಸ್ಥಿತಿಯೂ ಕೆಟ್ಟದಾಗಿದೆ. ಆಕೆ ಪ್ರಾರ್ಥಿಸುತ್ತಿದ್ದಾಗ ಮೇಲಿಂದ ಇಲಿಗಳು ಬೀಳುತ್ತವೆ’ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮತ್ತು ಪದೇ ಪದೇ ಸೋಲು ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಬಗ್ಗೆಯೂ ಟೀಕಿಸಿದ್ದಾರೆ.
ಖಾನ್ ಅವರು ಕಳೆದ ವರ್ಷದಿಂದ ಅಡಿಯಾಲಾ ಕಾರಾಗೃಹದಲ್ಲಿದ್ದಾರೆ.