ನ್ಯೂಯಾರ್ಕ್(ಪಿಟಿಐ): ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಬುಧವಾರ ಮಾತುಕತೆ ನಡೆಸಿದರು. ಆರ್ಥಿಕತೆ, ಶಿಕ್ಷಣ, ಬಾಹ್ಯಾಕಾಶ ಹಾಗೂ ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮಾಡಿರುವ ಸಾಧನೆಯನ್ನು ವಿವರಿಸಿದರು.
ಖ್ಯಾತ ಹೂಡಿಕೆದಾರ ರೇ ಡಲಿಯೊ ಅವರೊಂದಿಗೆ ಮಾತುಕತೆ ನಡಸಿದ ಮೋದಿ, ‘ದೇಶದ ಆರ್ಥಿಕ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ವಿವರಿಸಿದ್ದಾರೆ.
‘ಹೂಡಿಕೆಗೆ ಸಂಬಂಧಿಸಿ ಹಲವಾರು ಕಾನೂನುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತಿತ್ತು. ಇಂಥ ಕಠಿಣ ಹಾಗೂ ಅನಗತ್ಯವಾಗಿದ್ದ ಕಾನೂನುಗಳನ್ನು ಕಡಿಮೆ ಮಾಡಲಾಗಿದೆ’ ಎಂದು ವಿವರಿಸಿದ ಮೋದಿ, ಭಾರತದಲ್ಲಿ ಹೂಡಿಕೆ ಮಾಡುವಂತೆ ಡಲಿಯೊ ಅವರಿಗೆ ಆಹ್ವಾನ ನೀಡಿದರು’ ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಪಾಲ್ ರೋಮರ್ ಅವರೊಂದಿಗೆ ನಡೆಸಿದ ಚರ್ಚೆ ವೇಳೆ, ಆಧಾರ್ ಕಾರ್ಡ್, ಡಿಜಿಲಾಕರ್‌ನಂತಹ ಸೌಲಭ್ಯಗಳ ಕುರಿತು ವಿವರಿಸಿದರು. ದೇಶದ ನಗರ ಪ್ರದೇಶಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.
ಖಭೌತವಿಜ್ಞಾನಿ, ವಿಜ್ಞಾನ ಸಂವಹನಕಾರ ನೀಲ್ ಡಿ ‘ಗ್ರೇಸ್ ಟೈಸನ್ ಅವರೊಂದಿಗೆ ಚರ್ಚೆ ನಡೆಸಿದ ಪ್ರಧಾನಿ, ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕುರಿತು ಚರ್ಚಿಸಿದರು.
‘ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಕುರಿತು ಚರ್ಚಿಸಿದ ಮೋದಿ, ನೂತನ ಬಾಹ್ಯಾಕಾಶ ನೀತಿಯಡಿ ಈ ಕ್ಷೇತ್ರದಲ್ಲಿ ಖಾಸಗಿ ಮತ್ತು ಶೈಕ್ಷಣಿಕ ಸಹಭಾಗಿತ್ವಕ್ಕೆ ಇರುವ ಅವಕಾಶಗಳ ಕುರಿತು ವಿವರಿಸಿದರು’.
ಭೇಟಿ: ವಿವಿಧ ಕ್ಷೇತ್ರಗಳ ಗಣ್ಯರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬೌದ್ಧ ವಿದ್ವಾಂಸ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರೊ.ರಾಬರ್ಟ್ ಥರ್ಮನ್, ಖ್ಯಾತ ಗಣಿತ ತಜ್ಞ, ಲೇಖಕ ಪ್ರೊ.ನಸ್ಸೀಮ್ ನಿಕೋಲಾಸ್ ತಲೇಬ್ ಅವರೊಂದಿಗೆ ಮಾತಕತೆ ನಡೆಸಿದರು.
‘ಅಬಂಡನ್ಸ್ ಇನ್ ಮಿಲೆಟ್ಸ್’ ಗೀತೆ ಖ್ಯಾತಿಯ, ಗ್ರ್ಯಾಮಿ ಪ್ರಶಸ್ತಿ ವಿಜೇತೆ ಫಲ್ಗುಣಿ ಶಾ ಅವರನ್ನು ಮೋದಿ ಭೇಟಿ ಮಾಡಿದರು. ‘ಸಂಗೀತದ ಮೂಲಕ ಭಾರತ ಮತ್ತು ಅಮೆರಿಕ ಜನರನ್ನು ಒಂದುಗೂಡಿಸಿದ ಶಾ ಅವರ ಕಾರ್ಯವನ್ನು ಮೋದಿ ಶ್ಲಾಘಿಸಿದರು’ ಎಂದು ಪ್ರಕಟಣೆ ತಿಳಿಸಿದೆ.
ಶಿಕ್ಷಣ, ಕೃಷಿ, ಮಾರುಕಟ್ಟೆ, ಎಂಜಿನಿಯರಿಂಗ್, ಆರೋಗ್ಯ, ವಿಜ್ಞಾನ
ಮತ್ತು ತಂತ್ರಜ್ಞಾನ ಕ್ಷೇತ್ರಗಳ ತಜ್ಞರೊಂದಿಗೂ ಮೋದಿ ಸಭೆ ನಡೆಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಕುರಿತು ಚರ್ಚಿಸಿದರು ಎಂದೂ ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಪ್ರಮುಖ ಪಾಲುದಾರ ದೇಶ’
ವಾಷಿಂಗ್ಟನ್: ‘ಬರುವ ದಿನಗಳಲ್ಲಿ ಭಾರತವು ನಮ್ಮ ಪ್ರಮುಖ ಪಾಲುದಾರ ದೇಶವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ’ ಎಂದು ಶ್ವೇತಭವನ ಹೇಳಿದೆ.
‘ಭಾರತವು ಜಾಗತಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಹಿಂದೂಮಹಾಸಾಗರ–ಪೆಸಿಫಿಕ್ ಪ್ರದೇಶ ರಕ್ಷಣೆ, ಕ್ವಾಡ್‌ಗೆ ಸಂಬಂಧಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಆ ಮೂಲಕ ಮುಕ್ತ, ಸ್ವತಂತ್ರ ಹಾಗೂ ನಿಯಮಗಳನ್ನು ಆಧರಿಸಿದ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನ
ದಲ್ಲಿ ಅಮೆರಿಕದೊಂದಿಗೆ ಕೈಜೋಡಿಸುವ ಇಚ್ಛೆ ವ್ಯಕ್ತಪಡಿಸಿದೆ’ ಎಂದು ಕಾರ್ಯತಂತ್ರ ಸಂವಹನ ಕುರಿತ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿಸಿಎಸ್‌ಸಿ) ಸಮನ್ವಯಕಾರ ಜಾನ್ ಕಿರ್ಬಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸುಲಲಿತ ಸಾಗಾಣಿಕೆ ವ್ಯವಸ್ಥೆ, ಸೆಮಿಕಂಡಕ್ಟರ್‌ಗಳು ಸೇರಿದಂತೆ ವಿವಿಧ ತಂತ್ರಜ್ಞಾನ/ಕ್ಷೇತ್ರಗಳ ಭವಿಷ್ಯದ ಬಗ್ಗೆ ಜಗತ್ತೇ ಮಾತನಾಡುತ್ತಿದೆ. ಈ ವಿಚಾರಗಳಲ್ಲಿ ಭಾರತಕ್ಕಿಂತ ಹೆಚ್ಚು ಪರಿಣಾಮಕಾರಿ ಪಾಲುದಾರ ದೇಶ ಮತ್ತೊಂದಿಲ್ಲ’ ಎಂದು ಹೇಳಿದ್ದಾರೆ.
ಐತಿಹಾಸಿಕ ಭೇಟಿ: ಗಾರ್ಸೆಟ್ಟಿ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ಹಲವು ಆಯಾಮಗಳಿಂದ ಮಹತ್ವದ್ದು ಹಾಗೂ ಐತಿಹಾಸಿಕ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ಕೈಜೋಡಿಸುತ್ತಿರುವುದು ಇದಕ್ಕೆ ಕಾರಣ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
‘ಅಮೆರಿಕ–ಭಾರತ ವಾಣಿಜ್ಯ ಮಂಡಳಿ’ ಆಯೋಜಿಸಿದ್ದ ‘ಇಂಡಸ್–ಎಕ್ಸ್’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಮೋದಿ ಅವರ ಪ್ರವಾಸಕ್ಕೆ ಮಹತ್ವ ಇದೆ. ಹಲವು ಪ್ರಮುಖ ವಿಷಯಗಳ ಕುರಿತು ಉಭಯ ದೇಶಗಳ ನಾಯಕರು ಮಾತುಕತೆ ನಡೆಸುವರು. ಅವರ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆ ನಮ್ಮ ಮೇಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.