ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ ಚುನಾವಣೆ: ನವಾಜ್ ಷರೀಫ್ ಪಕ್ಷಕ್ಕೆ ಹೆಚ್ಚು ಸ್ಥಾನ

Published 6 ಮಾರ್ಚ್ 2024, 15:48 IST
Last Updated 6 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ (ಸಂಸತ್ತು) ಕಳೆದ ತಿಂಗಳು ನಡೆದ ಚುನಾವಣೆಯ ಸ್ಥಾನಗಳ ಸಂಖ್ಯೆಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್–ಎನ್ ಪಕ್ಷವು 123 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದಿದ್ದ ಅಭ್ಯರ್ಥಿಗಳು ಆ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿತ ಸುನ್ನಿ ಇತ್ತಿಹಾದ್ ಕೌನ್ಸಿಲ್‌ಗೆ (ಎಸ್ಐಸಿ) ಸೇರ್ಪಡೆಯಾಗಿದ್ದರು. ಆದರೆ, ಮಹಿಳೆಯರು ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಮೀಸಲಾದ ಕ್ಷೇತ್ರಗಳಿಗೆ ಎಸ್ಐಸಿ ಅರ್ಹವಾಗಿಲ್ಲ.ಎಸ್‌ಐಸಿಯು ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿಸಿಕೊಂಡಿದ್ದ ಕಾರಣ ಈ ಸೀಟುಗಳನ್ನು ಅನ್ಯ ಪಕ್ಷಗಳಿಗೆ ಹಂಚಿಕೆ ಮಾಡಬೇಕು ಎಂದು ಚುನಾವಣಾ ಆಯೋಗ ಹೇಳಿತು. ಹೀಗಾಗಿ ಪಿಎಂಎಲ್–ಎನ್ ಪಕ್ಷದ ಸೀಟು ಹೆಚ್ಚಳವಾಯಿತು.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್–ಎನ್ ಪಕ್ಷವು 75 ಸಾಮಾನ್ಯ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಜೊತೆಗೆ ಒಂಬತ್ತು ಪಕ್ಷೇತರ ಸಂಸದರು ಪಿಎಂಎಲ್–ಎನ್ ಪಕ್ಷ ಸೇರಿದ್ದರು. ಆ ಬಳಿಕ ಮಹಿಳೆಯರಿಗೆ ಮೀಸಲಾಗಿದ್ದ 19 ಸೀಟುಗಳು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿದ್ದ ನಾಲ್ಕು ಸೀಟುಗಳನ್ನು ಪಿಎಂಎಲ್–ಎನ್ ಪಕ್ಷಕ್ಕೆ ಹಂಚಿಕೆ ಮಾಡಲಾಗಿತ್ತು. ಅಲ್ಲದೆ, ಪಿಟಿಐ ಪಕ್ಷದ ಬೆಂಬಲಿತ ಎಸ್ಐಸಿ ಸದಸ್ಯರು ಗೆಲುವು ಸಾಧಿಸಿದ್ದ ಮಹಿಳೆಯರಿಗೆ ಮೀಸಲಾಗಿದ್ದ 20 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿದ್ದ 3 ಸೀಟುಗಳ ಪೈಕಿ ಒಂದು ಸೀಟನ್ನು ಚುನಾವಣಾ ಆಯೋಗವು ಪಿಎಂಎಲ್–ಎನ್ ಪಕ್ಷಕ್ಕೆ ಹಂಚಿಕೆ ಮಾಡಿತ್ತು. ಇದರೊಂದಿಗೆ ಪಿಎಂಎಲ್–ಎನ್ ಪಕ್ಷದ ಸಂಖ್ಯೆಯು 123ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 

ಹೊಸ ಪ್ರಧಾನಿ–ಸೇನಾ ಮುಖ್ಯಸ್ಥ ಚರ್ಚೆ

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಅವರು ಬುಧವಾರ ಪರಸ್ಪರ ಭೇಟಿಯಾಗಿ ದೇಶದ ಭದ್ರತಾ ವಿಚಾರಗಳ ಕುರಿತು ಚರ್ಚೆ ನಡೆಸಿದರು.  ದೇಶದ 24ನೇ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಅವರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು.  ಚುನಾವಣಾ ಪ್ರಕ್ರಿಯೆಯಲ್ಲಿ ಸೇನಾ ಪಡೆಗಳು ಹಸ್ತಕ್ಷೇಪ ಮಾಡುತ್ತಿವೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಪಾಕಿಸ್ತಾನದ ಸೇನೆಯ ಉನ್ನತ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ಇಮ್ರಾನ್ ಖಾನ್ ಖುರೇಷಿ ಬಿಡುಗಡೆಗೆ ಗೊತ್ತುವಳಿ

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಅವರ ಆಪ್ತ ಶಾ ಮಹಮ್ಮದ್ ಖುರೇಷಿ ಸೇರಿದಂತೆ ಇನ್ನಿತರ ಮುಖಂಡರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂಬ ಗೊತ್ತುವಳಿಯನ್ನು ಸೆನೆಟ್‌ನಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮಂಡಿಸಿದೆ.  ರಾಜಕೀಯ ಅಸೂಯೆಯ ಕಾರಣದಿಂದಾಗಿ ದೇಶದ ಆರ್ಥಿಕತೆ ಮತ್ತು ಕೀರ್ತಿ ಹಾಳಾಗಿದೆ ಎಂದು ಗೊತ್ತುವಳಿಯಲ್ಲಿ ಉಲ್ಲೇಖಿಸಲಾಗಿದೆ.  ಈ ಕುರಿತು ಗೊತ್ತುವಳಿ ಮಂಡಿಸಿದ ಪಿಟಿಐ ಪಕ್ಷದ ಹಿರಿಯ ಸಂಸದ ಫಲಕ್ ನಾಜ್ ಚಿತ್ರಾಲಿ ‘ಸುಳ್ಳು ಪ್ರಕರಣಗಳಲ್ಲಿ ದೋಷಿಗಳು ಎಂದು ತೀರ್ಮಾನಿಸಿ ಜೈಲಿನಲ್ಲಿ ಇಡಲಾಗಿರುವ ಪಿಟಿಐ ಪಕ್ಷದ ಮುಖಂಡರನ್ನು ಬಿಡುಗಡೆ ಮಾಡಬೇಕು. ಪಿಟಿಐ ಪಕ್ಷದ ಮುತ್ಸದ್ಧಿ ಡಾ. ಯಾಸ್ಮೀನ್ ರಶೀದ್ ಖಾನ್ ಪತ್ನಿ ಬೂಶ್ರಾ ಬಿಬಿ ಇತರೆ ಮಹಿಳಾ ಮುಖಂಡರು ಹಾಗೂ ಪತ್ರಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.  ಇದೇ ರೀತಿಯ ಗೊತ್ತುವಳಿಯನ್ನು ಮಂಗಳವಾರ ನ್ಯಾಷನಲ್ ಅಸೆಂಬ್ಲಿಯಲ್ಲೂ ಮಂಡನೆ ಮಾಡಲಾಗಿತ್ತು. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಹಿರಿ ಮುಖಂಡ ಶಾ ಮಹಮ್ಮದ್ ಖುರೇಷಿ ಅವರನ್ನು ರಾವಲ್ಪಿಂಡಿಯಲ್ಲಿರುವ ಭಾರಿ ಭದ್ರತಾ ವ್ಯವಸ್ಥೆ ಒಳಗೊಂಡಿರುವ ಆಡಿಯಾಲ ಜೈಲಿನಲ್ಲಿ ಇಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT