ಕಠ್ಮಂಡು: ನೇಪಾಳದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಪ್ರವಾಹ, ಭೂಕುಸಿತ ಮತ್ತಿತರ
ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 148ಕ್ಕೆ ಏರಿದೆ.
ಪೂರ್ವ ಹಾಗೂ ಮಧ್ಯ ನೇಪಾಳದ ಹಲವು ಪ್ರದೇಶಗಳು ಶುಕ್ರವಾರ ದಿಂದಲೂ ಮುಳುಗಡೆಯಾಗಿವೆ.
ದೇಶದ ಕೆಲವು ಭಾಗಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ರಸ್ತೆಗಳು ಹಾನಿಗೀಡಾಗಿದ್ದು, ಸಂಪರ್ಕ ಕಡಿತದಿಂದಾಗಿ ಅಸಂಖ್ಯಾತ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ, ಭೂಕುಸಿತ, ತಗ್ಗು ಪ್ರದೇಶಗಳ ಮುಳುಗಡೆಯಿಂದಾಗಿ 55 ಜನರು ನಾಪತ್ತೆಯಾಗಿದ್ದಾರೆ. 101 ಮಂದಿ ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ
ಮೂಲಗಳು ತಿಳಿಸಿವೆ.
ಕಠ್ಮಂಡು ಕಣಿವೆಯಲ್ಲಿ ಒಟ್ಟು 43 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 322 ಮನೆಗಳು ಹಾಗೂ 16 ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿಯು 3,626 ಜನರನ್ನು ರಕ್ಷಿಸಿದ್ದಾರೆ. 20 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
40–45 ವರ್ಷಗಳಲ್ಲಿ ಕಠ್ಮಂಡು ಕಣಿವೆಯಲ್ಲಿ ಇಂತಹ ವಿನಾಶಕಾರಿ ನೆರೆಯನ್ನು ನಾವು ನೋಡಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಬಾಗ್ಮತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಧಾಡಿಂಗ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ವೊಂದು ಭೂಕುಸಿತ ಸಂಭವಿಸಿದ್ದ ರಿಂದ ಮಣ್ಣಿನಡಿ ಸಿಲುಕಿ ಕನಿಷ್ಠ 19 ಜನರು ಜೀವಂತ ಸಮಾಧಿಯಾಗಿದ್ದಾರೆ. ಭಕ್ತಪುರದಲ್ಲಿ ಮನೆ ಕುಸಿದು ಐವರು ಮೃತಪಟ್ಟಿದ್ದಾರೆ.
ಮಕವಾನಪುರದಲ್ಲಿ ನೇಪಾಳ ಫುಟ್‌ಬಾಲ್ ಅಸೋಸಿಯೇಷನ್ ನಡೆಸುತ್ತಿರುವ ತರಬೇತಿ ಕೇಂದ್ರವು ಕುಸಿದಿದ್ದು, ಆರು ಮಂದಿ ಆಟಗಾರರು ಅಸುನೀಗಿದ್ದಾರೆ. ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ.
ಮಂಗಳವಾರದವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.