ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ | 100 ರೂ ನೋಟಲ್ಲಿ ಭಾರತಕ್ಕೆ ಸೇರಿದ ಭಾಗ; ವಿರೋಧಿಸಿದ ಆರ್ಥಿಕ ಸಲಹೆಗಾರ

Published 13 ಮೇ 2024, 10:53 IST
Last Updated 13 ಮೇ 2024, 10:53 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಜಾರಿಗೆ ತರಲು ಹೊರಟಿರುವ ಹೊಸ 100 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಭಾರತದ ಭೂಪ್ರದೇಶವಿರುವ ನಕ್ಷೆ (ಭಾರತ ಈಗಾಗಲೇ ತಿರಸ್ಕರಿಸಿರುವ) ಬಳಕೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದ ರಾಷ್ಟ್ರಪತಿಯ ಆರ್ಥಿಕ ಸಲಹೆಗಾರ ಚಿರಂಜೀವಿ ಅವರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಟೀಕೆಯ ಬೆನ್ನಲ್ಲೇ ಚಿರಂಜೀವಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಅದನ್ನು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌದೆಲ್ ಅವರು ಅಂಗೀಕರಿಸಿದ್ದಾರೆ. ನೇಪಾಳ ಸರ್ಕಾರವು ಇತ್ತೀಚೆಗೆ ದೇಶದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಕಾಲಪಾನಿ, ಲಿಪುಲೇಖ್‌ ಹಾಗೂ ಲಿಂಪಿಯಾಧುರ ಭಾಗಗಳು ಸೇರಿವೆ.

‘ರಾಷ್ಟ್ರದ ಕೇಂದ್ರೀಯ ಬ್ಯಾಂಕ್‌ನ ಮಾಜಿ ಗವರ್ನರ್‌ ಆಗಿ ಹಾಗೂ ಆರ್ಥಿಕ ವಿಷಯತಜ್ಞನಾಗಿ ನಾನು ಈ ಕುರಿತು ಪ್ರತಿಕ್ರಿಯಿಸಿದ್ದೇನೆ. ಆದರೆ ಮಾಧ್ಯಮಗಳು ಈ ವಿಷಯವನ್ನು ತಿರುಚಿ ಅನಗತ್ಯ ವಿವಾದ ಮಾಡಿದ್ದಾರೆ. ಜತೆಗೆ ರಾಷ್ಟ್ರಪತಿಯವರನ್ನು ಈ ವಿವಾದಲ್ಲಿ ಎಳೆದು ತರುವ ಪ್ರಯತ್ನ ಮಾಡಲಾಗಿದೆ. ಇದು ನಿಜಕ್ಕೂ ಬೇಸರ ತರಿಸಿದೆ’ ಎಂದು ಚಿರಂಜೀವಿ ಅವರು ಪಿಟಿಐಗೆ ಹೇಳಿದ್ದಾರೆ.

ಮೂರು ಪ್ರಾಂತ್ಯಗಳು ತನಗೆ ಸೇರಿದ್ದು ಎಂದು ಭಾರತ ಪ್ರತಿಪಾದಿಸಿದೆ. ಜತೆಗೆ ನೇಪಾಳದ ಕ್ರಮಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಿದ್ದರೂ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಭಾರತದ ಈ ಮೂರು ಪ್ರಾಂತ್ಯಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ನೇಪಾಳ ಸರ್ಕಾರ ಅಂಗೀಕರಿಸಿದೆ. 

ಕಳೆದ ವಾರ ನಡೆದ ನೇಪಾಳ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೊಂಡಿದ್ದು, ಹೊಸ ನೂರು ರೂ. ಮುಖಬೆಲೆಯ ನೋಟಿನಲ್ಲಿ ಹಳೆಯ ನಕ್ಷೆಯ ಜಾಗದಲ್ಲಿ ಹೊಸ ನಕ್ಷೆಯನ್ನು ಬಳಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಸರ್ಕಾರದ ಕ್ರಮಕ್ಕೆ ಮಾಜಿ ಪ್ರಧಾನಿ ಹಾಗೂ ಸಿಪಿಎನ್‌–ಯುಎಂಎಲ್‌ ಅಧ್ಯಕ್ಷ ಕೆ.ಪಿ.ಶರ್ಮಾ ಒಲಿ ಅವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಜತೆಗೆ ರಾಷ್ಟ್ರದ ಹಿತಕ್ಕೆ ವಿರುದ್ಧವಾಗಿ ಚಿರಂಜೀವಿ ಅವರು ನಡೆದುಕೊಂಡಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ದೇಶದ ಹಾಗೂ ತಮ್ಮ ಹುದ್ದೆಯ ಘನತೆ ಮರೆತಿದ್ದಾರೆ ಎಂದು ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಒಲಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 2020ರಲ್ಲಿ ಕಾಲಾಪಾನಿ, ಲಿಪುಲೇಖ್‌ ಹಾಗೂ ಲಿಂಪಿಯಾಧುರ ಪ್ರಾಂತ್ಯಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ಸಿದ್ಧಪಡಿಸಿದ್ದರು. ನೇಪಾಳದ ಸಂಸತ್ತು ಇದನ್ನು ಒಕ್ಕೊರಲಿನಿಂದ ಅಂಗೀಕರಿಸಿತ್ತು. ತದನಂತರ, ದೇಶದ ಎಲ್ಲಾ ಸರ್ಕಾರಿ ಕಡತಗಳಿಂದ ಹಳೆಯ ನಕ್ಷೆಯನ್ನು ತೆಗೆಸಿ, ಹೊಸ ನಕ್ಷೆಯನ್ನು ಅಳವಡಿಸಿತ್ತು. 

‘ಉಭಯ ದೇಶಗಳ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ಕುರಿತು ನಡೆದಿದ್ದ ನಮ್ಮ ಒಪ್ಪಂದವನ್ನು ನೇಪಾಳ ಉಲ್ಲಂಘಿಸಿದೆ. ಐತಿಹಾಸಿಕ ವಾಸ್ತವಗಳು ಮತ್ತು ಸಾಕ್ಷಿಗಳನ್ನು ಬಿಟ್ಟು ಕೃತಕವಾಗಿ ದೇಶದ ನಕ್ಷೆ ಹಿಗ್ಗಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ನೇಪಾಳ ಸರ್ಕಾರದ ಹೊಸ ನೋಟುಗಳಲ್ಲಿ ಭಾರತ ಭಾಗಗಳನ್ನು ಸೇರಿಸಿರುವ ನಕ್ಷೆ ಬಳಸುವ ಪ್ರಸ್ತಾವನೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕಳೆದ ವಾರ ಆಕ್ಷೇಪ ವ್ಯಕ್ತಪಡಿಸಿದ್ದರು. 

ನೇಪಾಳವು ಸದ್ಯ ಭಾರತದೊಂದಿಗೆ 1,850 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಗಡಿಗಳೂ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT