ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಭೂಕಂಪ: ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತರು

Published 6 ನವೆಂಬರ್ 2023, 15:58 IST
Last Updated 6 ನವೆಂಬರ್ 2023, 15:58 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಪರ್ವತ ಪ್ರದೇಶದಲ್ಲಿ ಈಚೆಗೆ ಸಂಭವಿಸಿದ ಭೂಕಂಪದಿಂದ ನಿರಾಶ್ರಿತರಾದ ಅಪಾರ ಸಂಖ್ಯೆಯ ಜನರು ಆಹಾರ, ಬಟ್ಟೆ, ಔಷಧಿಗಳ ಕೊರತೆ ಎದುರಿಸುತ್ತಿದ್ದಾರೆ.

ನೇಪಾಳದ ಪಶ್ಚಿಮ ಭಾಗದಲ್ಲಿ  ಜಾಜರ್‌ಕೋಟ್ ಮತ್ತು ರುಕುಂ ಜಿಲ್ಲೆಗಳಲ್ಲಿ ನ.3ರಂದು ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ 157 ಮಂದಿ ಮೃತಪಟ್ಟಿದ್ದರು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿತ್ತು.

ಆದರೆ, ಪರಿಹಾರ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಹಲವು ಸ್ಥಳಗಳಿಗೆ ಪರಿಹಾರ ಸಾಮಗ್ರಿಗಳು ಮತ್ತು ಅಗತ್ಯವಿರುವ ನೆರವು ಇನ್ನೂ ತಲುಪಿಲ್ಲ. ಇದರಿಂದ ನಿರಾಶ್ರಿತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.

‘ಆಹಾರ ಧಾನ್ಯ, ಬಟ್ಟೆ, ಬೆಲೆಬಾಳುವ ವಸ್ತುಗಳೆಲ್ಲವೂ ಅವಶೇಷಗಳಲ್ಲಿ ಹೂತುಹೋಗಿವೆ. ಅವುಗಳನ್ನು ಹೊರತೆಗೆಯಲು ಯಾರೊಬ್ಬರ ಸಹಾಯ ಸಿಗದಾಗಿದೆ. ಹೊರಗೆ ಶೀತ ಅಸಹನೀಯವಾಗಿದ್ದು, ಶುಕ್ರವಾರ ರಾತ್ರಿಯಿಂದಲೂ ಯಾರೊಬ್ಬರೂ ನಿದ್ರೆ ಮಾಡಿಲ್ಲ. ಯಾವೊಂದು ನೆರವು ನಮಗೆ ಸಿಕ್ಕಿಲ್ಲ. ಗ್ರಾಮಸ್ಥರೆಲ್ಲರೂ ನೆರವಿನ ನಿರೀಕ್ಷೆಯಲ್ಲಿದ್ದಾರೆ’ ಎಂದು ಚಿಯುರಿಟಾಲ್‌ ನಿವಾಸಿ ಬಿ.ಕೆ.ಸುರೇಶ್‌ ಹೇಳಿಕೊಂಡಿದ್ದಾರೆ.

‘ಎರಡು ದಿನ ಶೀತದಲ್ಲಿ ಕಳೆದ ಗ್ರಾಮಸ್ಥರು ಇದೀಗ ಅನಾರೋಗ್ಯಕ್ಕೀಡಾಗುತ್ತಿದ್ದಾರೆ’ ಎಂದು ಕಲಾವತಿ ಸಿಂಗ್ ಹೇಳಿದ್ದಾರೆ.

ಭೇರಿ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳು ಬಾಧಿತವಾಗಿದ್ದು, ಇಲ್ಲಿನ ಜನರು ಸಹ ಸಹಾಯ ಮತ್ತು ಪರಿಹಾರ ಸಾಮಗ್ರಿಗಳಿಗಾಗಿ ಕಾಯುತ್ತಿದ್ದಾರೆ.

‘ಹಾನಿಯ ಪ್ರಾಥಮಿಕ ಮೌಲ್ಯಮಾಪನ ಮುಗಿದಿದೆ. ಭದ್ರತಾ ಸಿಬ್ಬಂದಿ ಸಹಾಯದಿಂದ ಸೋಮವಾರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿ ವಿತರಿಸುತ್ತೇವೆ’ ಎಂದು ಭೇರಿ ಪುರಸಭೆಯ ಮೇಯರ್ ಚಂದ್ರ ಪ್ರಕಾಶ್ ಘರ್ತಿ ತಿಳಿಸಿದ್ದಾರೆ.

ದುರಂತದಲ್ಲಿ ಬದುಕುಳಿದವರು ತಮ್ಮ ಮೃತ ಸಂಬಂಧಿಕರ ಅಂತ್ಯಕ್ರಿಯೆಯನ್ನು ಭಾನುವಾರ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT