ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಚುನಾವಣೆ ಫಲಿತಾಂಶ: ಆಡಳಿತರೂಢ ಎನ್‌ಸಿಪಿ ಪ್ರಾಬಲ್ಯ?

Last Updated 23 ನವೆಂಬರ್ 2022, 13:47 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ಏಕೈಕ ದೊಡ್ಡ ಪಕ್ಷವಾಗಿಹೊರಹೊಮ್ಮುವ ಸೂಚನೆ ಬುಧವಾರ ಹೊರಬಿದ್ದಿದ್ದು, ಅಧಿಕಾರ ಉಳಿಸಿಕೊಳ್ಳಲು ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರಿಗೆ ಮಿತ್ರಪಕ್ಷಗಳ ನೆರವು ಬೇಕಾಗಲಿದೆ.

ಅತಂತ್ರ ಸಂಸತ್ತು ನಿರ್ಮಾಣವಾಗಿ, ಹೊಸ ರಾಜಕೀಯ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ. ದೇವುಬಾ ಅವರ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವುದುರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

ನೇಪಾಳ ಪ್ರಧಾನಿ ಶೇರ್ ಬಹದ್ದೂರ್‌ ದೇವುಬಾ ಅವರು ದಡೆಲ್ಧೂರಾ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಇದು ಅವರಿಗೆ ಏಳನೇ ಗೆಲುವು. ಐದು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿರುವ ದೇವುಬಾ ಅವರ ಎನ್‌ಸಿಪಿಗೆ ಫಲಿತಾಂಶ ಪ್ರಕಟವಾಗಿರುವ 22 ಸ್ಥಾನಗಳ ಪೈಕಿ 13 ಕ್ಷೇತ್ರಗಳಲ್ಲಿ ಗೆಲುವು ಲಭಿಸಿದೆ. ಪ್ರಮುಖ ವಿರೋಧ ಪಕ್ಷಗಳಾದ ನೇಪಾಳ ಕಮ್ಯುನಿಸ್ಟ್ ಏಕೀಕೃತ ಮಾರ್ಕ್ಸ್‌ವಾದಿ–ಲೆನಿನ್‌ವಾದಿ (ಯುಎಂಎಲ್‌)ಮತ್ತು ಹೊಸದಾಗಿ ರಚನೆಯಾಗಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷ (ಎನ್‌ಐಪಿ) ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿವೆ.

91 ಸ್ಥಾನಗಳಲ್ಲಿ ಸ್ಪರ್ಧಿಸಿರುವ ದೇವುಬಾ ಅವರ ನೇತೃತ್ವದಪಕ್ಷವು 42 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಪ್ರಮುಖ ಪ್ರತಿಸ್ಪರ್ಧಿ ಯುಎಂಎಲ್ 141 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು,43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಐಪಿ 5 ಸ್ಥಾನಗಳಲ್ಲಿ ಮುಂದಿದೆ.135 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ.

ಮೈತ್ರಿಕೂಟದಲ್ಲಿ ಪ್ರಮುಖ ಪಾಲುದಾರವಾಗಿರುವ ಮಾವೋವಾದಿ ಸೆಂಟರ್‌ ಪಕ್ಷ 14 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕೇವಲ ಎರಡು ಸ್ಥಾನಗಳನ್ನು ಗೆದ್ದಿದೆ. ಚುನಾವಣಾ ಅಧಿಕಾರಿಗಳು ಲಕ್ಷಾಂತರ ಮತಪತ್ರಗಳನ್ನು ಕೈಗಳಿಂದಲೇ ಎಣಿಸಬೇಕಾಗಿರುವುದರಿಂದ ಅಂತಿಮ ಫಲಿತಾಂಶ ಹೊರಬೀಳಲು ಇನ್ನೂ 10 ದಿನಗಳು ಬೇಕಾಗಬಹುದು.

ಹಿಮಾಲಯ ಶ್ರೇಣಿಯ ಪುಟ್ಟ ರಾಷ್ಟ್ರದ ಸಂಸತ್ತಿನ 275 ಸಂಸದರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇ 61ರಷ್ಟು ಮತದಾರರು (ಸುಮಾರು 1.8 ಕೋಟಿ ಮತದಾರರು) ಮತಚಲಾಯಿಸಿದರು. ಮೊದಲ ಹಂತದಲ್ಲಿ 165 ಸಂಸದರನ್ನು ಪ್ರಾತಿನಿಧ್ಯದ ಅನುಪಾತದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಪ್ರಭಾವಕ್ಕಾಗಿ ಭಾರತ– ಚೀನಾ ಪೈಪೋಟಿ

ನೇಪಾಳಿ ಕಾಂಗ್ರೆಸ್ ಪಕ್ಷವು ಭಾರತದ ಪರವಾಗಿದ್ದರೆ, ಯುಎಂಎಲ್ ಚೀನಾಕ್ಕೆ ಹತ್ತಿರವಿದೆ ಎಂದೇ ಪರಿಗಣಿಸಲಾಗುತ್ತದೆ. ನೆರವು ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೂಲಕನೇಪಾಳದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಉಭಯ ರಾಷ್ಟ್ರಗಳು ಪೈಪೋಟಿ ನಡೆಸುತ್ತಿವೆ. ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಮತ್ತು ಜಲಶಕ್ತಿಯ ನೆಲೆಯಾಗಿರುವ ನೇಪಾಳದಲ್ಲಿ ಯಾರ ಪ್ರಭಾವ ಹೆಚ್ಚಲಿದೆ ಎನ್ನುವುದನ್ನೂ, ಚೀನಾ– ಭಾರತದ ನಡುವೆ ಯುದ್ಧ ಸಂಭವಿಸಿದರೆ, ಸಮರ ಭೂಮಿಯಲ್ಲಿ ಯಾರು ಮೇಲುಗೈ ಸಾಧಿಸುವರೆಂಬುದನ್ನೂ ಈ ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ ಎನ್ನುವುದುವಿಶ್ಲೇಷಕರ ಅಭಿಪ್ರಾಯ.

ಮುಖ್ಯಾಂಶಗಳು

* ಅಂತಿಮ ಫಲಿತಾಂಶಕ್ಕೆ ಬೇಕು ಇನ್ನೂ ಹತ್ತು ದಿನ

* ಅತಂತ್ರ ಸಂಸತ್‌ ನಿರ್ಮಾಣ ಸಾಧ್ಯತೆ

* ಹೊಸ ಸರ್ಕಾರ ರಚನೆಗೆ ಹೊಸ ಪಕ್ಷಗಳ ಪಾತ್ರ

* ಫಲಿತಾಂಶಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ, ಚೀನಾ

ಜನರು ಬದಲಾವಣೆ ಬಯಸಿದ್ದಾರೆ. ಅತಂತ್ರ ಸಂಸತ್‌ ಸೃಷ್ಟಿ ಮತ್ತು ಯುವ ನಾಯಕರ ಹೊಸ ಪಕ್ಷಗಳು ಸರ್ಕಾರದ ರಚನೆಯಲ್ಲಿಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ
ಗೆಜಾ ಶರ್ಮಾ ವಾಗ್ಲೆ, ನೇ‍ಪಾಳಿ ರಾಜಕೀಯ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT