ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್‌ ಆದೇಶ

Published : 9 ನವೆಂಬರ್ 2022, 12:30 IST
ಫಾಲೋ ಮಾಡಿ
Comments

ಲಂಡನ್‌: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚನೆ ಪ್ರಕರಣ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧಿಸಿದಂತೆ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಆಗ್ನೇಯ ಲಂಡನ್‌ನ ವಾಂಡ್ಸ್‌ ವರ್ತ್‌ ಜೈಲಿನಲ್ಲಿ 2019ರಿಂದ ಬಂದಿಯಾಗಿರುವ 51 ವರ್ಷದ ಉದ್ಯಮಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ಅದನ್ನುಪ್ರಶ್ನಿಸಿ ನೀರವ್‌ ಮೋದಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆರೆಮಿ ಸ್ಟುವರ್ಟ್‌ ಸ್ಮಿತ್‌ ಹಾಗೂ ರಾಬರ್ಟ್‌ ಜೇ ಅವರ ಪೀಠ ತೀರ್ಪು ತಿರಸ್ಕರಿಸಿದೆ.

ಮೋದಿಯ ಮಾನಸಿಕ ಸ್ಥಿತಿ ಮತ್ತು ಆತ್ಮಹತ್ಯೆಯ ಅಪಾಯದ ಕಾರಣಕ್ಕೆ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಅನ್ಯಾಯ ಅಥವಾ ದಬ್ಬಾಳಿಕೆ ಎಂದು ಪರಿಗಣಿಸಬೇಕಾಗಿಲ್ಲ ಎಂದು ಕೋರ್ಟ್‌ ತೀರ್ಪು ನೀಡಿದೆ.

ಈ ತೀರ್ಪಿನ ವಿರುದ್ಧ 14 ದಿನ ಗಳ ಒಳಗಾಗಿ ನೀರವ್‌ ಬ್ರಿಟನ್‌ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಸಹ ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದರೆ, ಯುರೋಪಿಯನ್ ಕೋರ್ಟ್ ಆಫ್‌ ಹ್ಯೂಮನ್ ರೈಟ್‌ಗೆ ಹೋಗುವ ಅವಕಾಶ ಇದೆ. ಹೀಗಾಗಿ ನೀರವ್‌ ಮೋದಿಯನ್ನು ಭಾರತಕ್ಕೆ ಕರೆತಂದು ಮುಂಬೈಯ ಅರ್ಥರ್‌ ರೋಡ್‌ ಜೈಲ್‌ನಲ್ಲಿ ಬಂಧಿಸಿಡುವ ಪ್ರಕ್ರಿಯೆಗೆ ಇನ್ನಷ್ಟು ಸಮಯ ಹಿಡಿಯಬಹುದು ಎಂದು ಹೇಳಲಾಗಿದೆ.

ಸಿಬಿಐ ಮತ್ತು ಇ.ಡಿ ಗಳು ಸಲ್ಲಿಸಿದ ದಾಖಲಿಸಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀರವ್‌ ಮೋದಿಯನ್ನು ಹಸ್ತಾಂತರಿಸಬೇಕು ಎಂದು ಭಾರತವು ಬ್ರಿಟನ್‌ ಸರ್ಕಾರವನ್ನು ಕೋರಿದ ಮೇರೆಗೆ ಈ ಬೆಳವಣಿಗೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT