ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರ ಪ್ರಕರಣ: ತೆರೆದ ಶೌಚಾಲಯ, ತಿಗಣೆಯುಳ್ಳ ಜೈಲು ಕೊಠಡಿಯಲ್ಲಿ ಇಮ್ರಾನ್‌

Published 8 ಆಗಸ್ಟ್ 2023, 13:41 IST
Last Updated 8 ಆಗಸ್ಟ್ 2023, 13:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಅಟಕ್‌ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ತಿಗಣೆ ಕಾಟವಿರುವ, ತೆರೆದ ಶೌಚಾಲಯದ, ಅತಿ ಚಿಕ್ಕದಾದ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಅವರ ವಕೀಲರು ಆರೋಪಿಸಿದ್ದಾರೆ.  

ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್‌ ಖಾನ್‌ ಅವರ ಮುಂದಿನ ಕಾನೂನು ಹೋರಾಟಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಪಡೆಯಲೆಂದು ವಕೀಲ ನಯೀಮ್‌ ಹೈದರ್‌ ಪಂಜೋತಾ ಮಂಗಳವಾರ ಜೈಲಿಗೆ ತೆರಳಿದ್ದರು. ಮಾಜಿ ಪ್ರಧಾನಿಯನ್ನು 45 ನಿಮಿಷಗಳ ಕಾಲ ಭೇಟಿಯಾಗಿ ಬಂದ ಪಂಜೋತಾ, ಜೈಲಿನಲ್ಲಿ ಇಮ್ರಾನ್‌ಗೆ ಒದಗಿರುವ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.   

‘70 ವರ್ಷ ವಯಸ್ಸಿನ ಇಮ್ರಾನ್‌ ಖಾನ್‌ಗೆ ಜೈಲಿನಲ್ಲಿ ‘ಸಿ’ ದರ್ಜೆಯ ಸವಲತ್ತುಗಳನ್ನು ಒದಗಿಸಲಾಗಿದೆ. ಅವರಿಗೆ ನೀಡಲಾಗಿರುವ ಕೋಣೆ ಅತಿ ಚಿಕ್ಕದು. ನೊಣ, ತಿಗಣೆಗಳ ಉಪಟಳವಿದೆ, ತೆರೆದ ಶೌಚಾಲಯವಿದೆ. ಕಗ್ಗತ್ತಲೆಯ ಕೋಣೆಗೆ ತಮ್ಮನ್ನು ದೂಡಿರುವುದಾಗಿಯೂ, ಹಗಲಲ್ಲಿ ನೊಣಗಳು, ರಾತ್ರಿ ವೇಳೆ ಇರುವೆಗಳು ಬಾಧಿಸುತ್ತಿರುವುದಾಗಿಯೂ ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ‘ ಎಂದು ಪಂಜೋತಾ ತಿಳಿಸಿದರು.   

‘ಇಡೀ ಜೀವನವನ್ನೇ ಜೈಲಿನಲ್ಲಿ ಕಳೆಯಲು ಸಿದ್ಧವಿದ್ದೇನೆ ಎಂದೂ ಖಾನ್‌ ತಿಳಿಸಿದ್ದಾರೆ’ ಎಂದು ಅವರು  ಹೇಳಿದರು. 

ಬಂಧನದ ವೇಳೆ ಪೊಲೀಸರು ನೋಟಿಸ್ ತೋರಿಸಲಿಲ್ಲ. ಪತ್ನಿ ಇದ್ದ ಕೋಣೆಯ ಬಾಗಿಲನ್ನು ಪೊಲೀಸರು ಒಡೆಯಲು ಮುಂದಾಗಿದ್ದರು ಎಂದು ಖಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ವಕೀಲ ಪಂಜೋತ ತಿಳಿಸಿದರು.   

ಸಜೆ ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್‌ ಖಾನ್‌ ಅವರನ್ನು ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿರಿಸುವಂತೆ ಕೋರ್ಟ್‌ ಆದೇಶಿಸಿತ್ತು. ಆದರೂ, ಅವರನ್ನು ಪಂಜಾಬ್‌ ಪ್ರಾಂತ್ಯದ ಅಟಕ್‌ ಜೈಲಿನಲ್ಲಿ ಇರಿಸಲಾಗಿದೆ. 

ಈ ವರ್ಷದ ಅಂತ್ಯದಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು, ಈ ಮಧ್ಯೆ ಎದುರಾಗಿರುವ ಜೈಲು ಶಿಕ್ಷೆ ಖಾನ್‌ ಅವರ ರಾಜಕೀಯ ಜೀವನವನ್ನು ಮಸುಕಾಗಿಸಿದೆ. ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿಯ ಅವಧಿ ಇದೇ 12ರಂದು ಅಂತ್ಯಗೊಳ್ಳಲಿದೆ.  

ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಕಳೆದ ಶನಿವಾರ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಸಜೆ ವಿಧಿಸಿದೆ. ಇದರ ಬೆನ್ನಿಗೇ ಪೊಲೀಸರು ಖಾನ್‌ ಅವರನ್ನು ಲಾಹೋರ್‌ನ ಅವರ ನಿವಾಸದಿಂದ ಬಂಧಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT