ಇಸ್ಲಾಮಾಬಾದ್: ಪಾಕಿಸ್ತಾನದ ಆಯೋಜಿಸಿರುವ ಶಾಂಘೈ ಸಹಕಾರಿ ಸಂಸ್ಥೆ (ಎಸ್‌ಸಿಒ) ಸಭೆಗೆ ವಿವಿಧ ದೇಶಗಳ ಸರ್ಕಾರಿ ಮುಖ್ಯಸ್ಥರನ್ನು ಆಹ್ವಾನಿಸಲಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ವಕ್ತಾರೆ ಮುಮ್ತಾಜ್ ಜಹ್ರಾ ಬಲೂಚ್ ತಿಳಿಸಿದ್ದಾರೆ.
ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಮ್ತಾಜ್, ‘ಅಕ್ಟೋಬರ್ 15 ಮತ್ತು 16 ರಂದು ಸಂಸ್ಥೆಯ ಸಭೆ ನಡೆಯಲಿದ್ದು, ವಿವಿಧ ದೇಶಗಳಿಗೆ ಆಹ್ವಾನ ಕಳುಹಿಸಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಲಾಗಿದೆ’ ಎಂದು ಪ್ರತ್ಯೇಕವಾಗಿ ನುಡಿದರು.
‘ಈಗಾಗಲೇ ಹಲವು ದೇಶಗಳು ಸಭೆಯಲ್ಲಿ ಭಾಗವಹಿಸುವ ಬಗ್ಗೆ ಒಪ್ಪಿಗೆ ನೀಡಿವೆ. ಯಾವ ದೇಶವು ದೃಢಪಡಿಸಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದರು.
ಭಾರತದೊಂದಿಗಿನ ಸಂಬಂಧ ಕುರಿತ ಸುದ್ದಿಗಾರರ ಪ್ರಶ್ನೆಗೆ, ‘ವಾಣಿಜ್ಯಿಕ ವಿಚಾರವಾಗಿ ಭಾರತದ ಜೊತೆ ನೇರವಾದ ದ್ವಿಪಕ್ಷೀಯ ಸಂಬಂಧವನ್ನು ಪಾಕಿಸ್ತಾನ ಹೊಂದಿಲ್ಲ’ ಎಂದು ಅವರು ಪ್ರತಿಯಿಸಿದ್ದಾರೆ.
ಎಸ್‌ಸಿಒ ಸಭೆಯು ಸಚಿವರು, ಹಿರಿಯ ಅಧಿಕಾರಿಗಳನ್ನು ಒಳಗೊಂಡು ಹಲವು ಸುತ್ತಿನಲ್ಲಿ ನಡೆಯುವ ಸಭೆಯಾಗಿದೆ. ಈ ಸಭೆಯಲ್ಲಿ ಮುಖ್ಯವಾಗಿ ಆರ್ಥಿಕತೆ, ಹಣಕಾಸು, ಸಾಮಾಜಿಕ ಮತ್ತು ಸಾಂಸ್ಕೃತಿಕ, ಮಾನವೀಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.
ಈ ಎಸ್‌ಸಿಒ ಸಂಸ್ಥೆಯು ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಜಕಿಸ್ತಾನ, ತಜಕಿಸ್ತಾನ, ಉಜಬೇಕಿಸ್ತಾನ ಮತ್ತು ಕರ್ಗಿಸ್ತಾನ ದೇಶಗಳನ್ನು ಒಳಗೊಂಡಿದೆ.