ನ್ಯೂಯಾರ್ಕ್: ‘ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಮಾತನಾಡುತ್ತಾ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಮ್ಮು– ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ.
‘ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳಸಾಗಣೆ, ಅಂತರರಾಷ್ಟ್ರೀಯಮಟ್ಟದ ಅಪರಾಧಗಳಿಗೆ ಕುಖ್ಯಾತಿ ಹೊಂದಿರುವ ಹಾಗೂ ಸೇನೆಯ ಆಡಳಿತದಲ್ಲಿರುವ ದೇಶವು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುವ ಧೈರ್ಯವನ್ನು ಪ್ರದರ್ಶಿಸುವ ಮೂಲಕ ವಿಶ್ವಸಂಸ್ಥೆಯ ಶುಕ್ರವಾರದ ಬೆಳಗಿನ ಅಧಿವೇಶನವನ್ನು ನಗೆಪಾಟಲಿಗೀಡು ಮಾಡಿತು’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ನಿಯೋಗದ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಹೇಳಿದರು.
‘ಪಾಕಿಸ್ತಾನವು, ಗಡಿಯಾಚೆಗಿನ ಭಯೋತ್ಪಾದನೆಯನ್ನು ನೆರೆಹೊರೆಯವರ ವಿರುದ್ಧ ತನ್ನ ಅಸ್ತ್ರವನ್ನಾಗಿ ಬಹಳ ಹಿಂದಿನಿಂದಲೂ ಬಳಸುತ್ತಿದೆ ಎಂಬುದು ಜಗತ್ತಿಗೆ ಗೊತ್ತಿದೆ’ ಎಂದು ಅವರು ಪ್ರತಿಪಾದಿಸಿದರು.
‘ನಮ್ಮ ಸಂಸತ್ತು, ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆಗಳು, ತೀರ್ಥಯಾತ್ರೆ ಮಾರ್ಗಗಳ ಮೇಲೂ ದಾಳಿ ನಡೆಸಿರುವ ದೇಶವು, ಹಿಂಸಾಚಾರದ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ’ ಎಂದರು.
ನಿರೀಕ್ಷೆಯಂತೆಯೇ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದ ಷರೀಫ್, ‘370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಮತ್ತೆ ನೀಡಬೇಕು ಮತ್ತು ಈ ವಿಚಾರವನ್ನು ಮಾತುಕತೆಯೊಂದಿಗೆ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದ್ದರು.
Watch: India exercises its Right of Reply at the 79th session of the @UN General Assembly debate.@DrSJaishankar @MEAIndia pic.twitter.com/c6g4HAKTBg
— India at UN, NY (@IndiaUNNewYork) September 28, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.