ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ನಗರಗಳ ಪಟ್ಟಿ: ಬೆಂಗಳೂರಿಗೆ 5ನೇ ಸ್ಥಾನ

ದಿ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ನ ಸಮೀಕ್ಷೆ
Last Updated 20 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಸಿಂಗಪುರ: ವಿಶ್ವದಲ್ಲಿರುವ ಅಗ್ಗದ ನಗರಗಳ ಪೈಕಿ ಬೆಂಗಳೂರಿಗೆ 5ನೇ ಸ್ಥಾನ ಲಭಿಸಿದ್ದರೆ, ಚೆನ್ನೈ ಹಾಗೂ ನವದೆಹಲಿ ಕ್ರಮವಾಗಿ 7 ಮತ್ತು 8ನೇ ಸ್ಥಾನ ಪಡೆದಿವೆ.

ಇನ್ನು, ಸಿಂಗಪುರ, ಪ್ಯಾರಿಸ್‌ ಹಾಗೂ ಹಾಂಗ್‌ಕಾಂಗ್ ನಗರಗಳು ಅತಿ ದುಬಾರಿ ನಗರ ಎಂಬ ಪಟ್ಟ ಪಡೆದಿವೆ. ಈ ಪೈಕಿ ಪ್ಯಾರಿಸ್‌ ಕಳೆದ ವರ್ಷ ಎರಡನೇ ಹಾಗೂ ಅದರ ಹಿಂದಿನ ವರ್ಷ 7ನೇ ಸ್ಥಾನದಲ್ಲಿತ್ತು. ಈಗ ದಿಢೀರ್‌ನೆ ಮೊದಲ ಸ್ಥಾನಕ್ಕೇರಿರುವುದು ಗಮನಾರ್ಹ.

‘ಹೊರ ದೇಶದಿಂದ ಹೋದವರಿಗೆ ಪ್ಯಾರಿಸ್‌ ಅತ್ಯಂತ ದುಬಾರಿ ನಗರವೇ ಸರಿ. ಪುರುಷರು ಧರಿಸುವ ಬಿಸಿನೆಸ್‌ ಸೂಟ್‌ನ ಬೆಲೆ ₹ 1.37 ಲಕ್ಷ (ಎರಡು ಸಾವಿರ ಡಾಲರ್‌), ಮಹಿಳೆಯರ ಕೇಶ ವಿನ್ಯಾಸಕ್ಕೆ ₹ 8,264 ( 120 ಡಾಲರ್‌) ತೆರಬೇಕು’ ಎಂದು ಈ ಕುರಿತು ಸಮೀಕ್ಷೆ ನಡೆಸಿರುವ ದಿ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಸಂಸ್ಥೆಯ ವರದಿ ಹೇಳುತ್ತದೆ.

ಕರೆನ್ಸಿಯ ಮೌಲ್ಯದಲ್ಲಿ ಹೆಚ್ಚಳ, ಹಣದುಬ್ಬರ ಹಾಗೂ ಆಯಾ ದೇಶಗಳಲ್ಲಿನ ರಾಜಕೀಯದಲ್ಲಿನ ಸ್ಥಿತ್ಯಂತರ ಈ ಬಾರಿಯ ಸ್ಥಾನಗಳಲ್ಲಿನ ವ್ಯತ್ಯಾಸದ ಮೇಲೆ ಪ್ರಭಾವ ಬೀರಿರುವ ಅಂಶಗಳು ಎಂದು ಸಮೀಕ್ಷೆ
ತಿಳಿಸಿದೆ.

‘ಅಗ್ಗದ ನಗರಗಳು ಎಂದಾಗ ಆ ನಗರಗಳಲ್ಲಿ ಉತ್ತಮ ಜೀವನ ನಡೆಸಲು ತುಸು ಕಷ್ಟ ಎಂದೂ ಅರ್ಥ’ ಎನ್ನುತ್ತದೆ ಈ ಸಮೀಕ್ಷೆ.

ಸಮೀಕ್ಷೆಗೆ ಬಳಸಿದ ಮಾನದಂಡ: ವಿಶ್ವದ 133 ನಗರಗಳಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಸರಕು ಮತ್ತು ಸೇವೆಗಳು ಸೇರಿದಂತೆ ಒಟ್ಟು 160 ಉತ್ಪನ್ನ ಮತ್ತು ಸೇವೆಗಳ ಬೆಲೆಗಳನ್ನು ತುಲನೆ ಮಾಡಲಾಗಿದೆ. ಸಮೀಕ್ಷೆ ಕೈಗೊಂಡ ನಗರಗಳಲ್ಲಿ ಆಹಾರ ಮತ್ತು ಪಾನೀಯ, ಬಟ್ಟೆ, ಮನೆ ಬಾಡಿಗೆ, ಸಾರಿಗೆ, ಶಿಕ್ಷಣ ಹಾಗೂ ಮನರಂಜನೆಗೆ ಆಗುವ ವೆಚ್ಚವನ್ನು ಪರಿಗಣಿಸಲಾಗಿದೆ.

ಸಮೀಕ್ಷೆ ಉದ್ದೇಶ

ಬೇರೆ ದೇಶಗಳಿಂದ ಉದ್ಯೋಗ ಅರಸಿ ಹೋಗುವವರ ಅನುಕೂಲಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ದಿ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಹೇಳಿದೆ. ಕಂಪೆನಿಗಳು ಸಮೀಕ್ಷೆಯಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಉದ್ಯೋಗಿಗಳಿಗೆ ನೀಡುವ ವೇತನ, ಇತರ ಭತ್ಯೆಗಳನ್ನು ಲೆಕ್ಕಾಚಾರ ಹಾಕಲಿ ಎಂಬುದೇ ಈ ಸಮೀಕ್ಷೆಯ ಉದ್ದೇಶ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT